ಜು.3: ಗೋಹತ್ಯೆ ನೀಷೇಧಕ್ಕೆ ಆಗ್ರಹಿಸಿ ವಿಎಚ್‌ಪಿ, ಬಜರಂಗದಳದಿಂದ ಪ್ರತಿಭಟನೆ: ಸುನಿಲ್ ಕೆ.ಆರ್.

ಉಡುಪಿ, ಜೂ. 28: ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಹತ್ಯೆಗೆ ಕಡಿವಾಣ ಹಾಕಬೇಕು. ಹಾಗೂ ಗೋ ಹತ್ಯೆ ನಿಷೇಧ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ಜುಲೈ 3ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿವುದು ಎಂದು ಬಜರಂಗ ದಳದ ಪ್ರಾಂತ ಸಂಚಾಲಕ ಸುನಿಲ್‌ ಕೆ.ಆರ್. ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಡುಪಿ ಸೇರಿದಂತೆ ಕರಾವಳಿಯಾದ್ಯಂತ ಗೋ ಕಳ್ಳರು ಪೊಲೀಸರ ಕಣ್ಣು ತಪ್ಪಿಸಿ ಹಿಂಸಾತ್ಮಕವಾಗಿ ಗೋಕಳ್ಳ ಸಾಗಾಟ ನಡೆಸುತ್ತಿದ್ದಾರೆ. ಹಟ್ಟಿಯಿಂದ ಕಳವುಗೈದು‌ ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವ ಘಟನೆಗಳು ನಡೆಯುತ್ತಿವೆ. ಆದರೆ
ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಗೋ ವಧೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ.
ಮಂಗಳೂರು ಹಾಗೂ ಉಡುಪಿ ವ್ಯಾಪ್ತಿಯಲ್ಲಿ ಅಧೀಕೃತ ಕಸಾಯಿಖಾನೆ ಇರುವುದು ಒಂದು. ಆದರೆ ದನದ ಮಾಂಸ ಮಾರಾಟ ಮಾಡುವ ಅಂಗಡಿಗಳು 300 ಇವೆ. ಹಾಗಾದರೆ ಅನಧೀಕೃತ ಕಸಾಯಿಖಾನೆಗಳು ಎಷ್ಟಿವೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು.
ಕರಾವಳಿಯಾದ್ಯಂತ ಕೋಮುಗಲಭೆ ಹಾಗೂ ಇನ್ನಿತರ ಗಲಭೆಗಳಿಗೆ ಗೋಕಳ್ಳತನ, ಅಕ್ರಮ ಸಾಗಾಟವೇ ಪ್ರಮುಖ ಕಾರಣ. ಆ ಘಟನೆಗಳನ್ನು ಸರ್ಕಾರ, ಜಿಲ್ಲಾಡಳಿತ ಅರಿತುಕೊಳ್ಳಬೇಕು. ಮಂಗಳೂರಿನಲ್ಲಿ ಎಸ್ಪಿ ಅವರು ಗೋ ಹತ್ಯೆ ತಡೆಗೆ ವಿಶೇಷ ತಂಡ ರಚಿಸಲು ತೀರ್ಮಾನಿಸಿದ್ದಾರೆ. ಉಡುಪಿ ಎಸ್ಪಿ ಅವರು ಕೂಡ ಗೋ ಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾ ಮಟ್ಟದಲ್ಲಿ ಒಂದು ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿದರು.
ಗೋ ಹತ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಎಚ್‌ಪಿ ಹಾಗೂ ಬಜರಂಗದಳ ಸಂಘಟನೆ ಮೊದಲ ಹೆಜ್ಜೆ ಇಟ್ಟಿದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಗೋವುಗಳ
ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರ ಸ್ವರೂಪವನ್ನು
ಪಡೆಯಲಿದೆ ಎಂದು ಎಚ್ಚರಿಸಿದ ಅವರು, ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಆಗ್ರಹಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರಿಗೂ ಮನವಿ ಮಾಡಲಿದ್ದೇವೆ ಎಂದರು.
ಮೈತ್ರಿ ಸರ್ಕಾರ ವಿಫಲ:
ಗೋ ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ವಿಫಲವಾಗಿದೆ. ಸರ್ಕಾರವು ನಮ್ಮದು ರೈತರ ಪರವಾಗಿರುವ ಸರ್ಕಾರ. ರೈತರ ಸಾಲಮನ್ನಾ ಹಾಗೂ ಹಾಲಿಗೆ ಪ್ರೋತ್ಸಾಹಧನ ನೀಡುತ್ತಿದ್ದೇವೆ ಎನ್ನುತ್ತಾರೆ. ಆದರೆ ರೈತರಿಗೆ ಆದಾಯ ತಂದುಕೊಡುವ ಗೋವುಗಳ ರಕ್ಷಣೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಪ್ರಮೋದ್‌ ಮಂದಾರ್ತಿ, ನಗರಾಧ್ಯಕ್ಷ ಸಂತೋಷ್‌
ಸುವರ್ಣ ಬೊಳ್ಜೆ, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್‌ ಮೆಂಡನ್‌, ಜಿಲ್ಲಾ ಗೋ ರಕ್ಷಾ ಪ್ರಮುಖ್‌ ದಿನೇಶ್‌ ಶೆಟ್ಟಿ, ಹಿಂದು ಜಾಗರಣಾ ವೇದಿಕೆಯ ಪ್ರ. ಕಾರ್ಯದರ್ಶಿ
ಪ್ರಕಾಶ್‌ ಕುಕ್ಕೆಹಳ್ಳಿ ಇದ್ದರು.