ಮಹಾತ್ಮರು ನಡೆದಾಡಿದ ಪುಣ್ಯ ಭೂಮಿ ನಮ್‌ ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಲಾವಣ್ಯ ಬರೆದ ವಿಶೇಷ ಬರಹ

ನಮ್ಮೂರಾದ ಕುಂದಾಪುರವು ತನ್ನ ವಿಶಿಷ್ಟವಾದ ಭಾಷೆ, ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಆಹಾರ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಒಳಗೊಂಡು ಕರ್ನಾಟಕ ರಾಜ್ಯದಲ್ಲಿ ಎಲ್ಲರಿಂದಲೂ ಗುರುತಿಸಲ್ಪಡುವ ತಾಲೂಕಾಗಿದೆ. ಇದರ ಜೊತೆಗೆ ವಿಶ್ವ ಕುಂದಾಪುರ ದಿನವನ್ನು ಇಡೀ ದೇಶದಾದ್ಯಂತ ಆಚರಿಸುತ್ತಾರೆ ಎನ್ನುವುದು ನಮಗೆ ಅಭಿಮಾನದ ಸಂಗತಿ. ಹಾಗಾಗಿ ವಿಶ್ವ ಕುಂದಾಪುರ ದಿನದ ಸಲುವಾಗಿ ಈ ಲೇಖನ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವುದಲ್ಲ. ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನ ಇದರ ಹಿಂದಿದೆ. ಹೀಗೆ ದಾಸ್ಯದ ಸಂಕೋಲೆಯನ್ನು ಕಳಚಿ ಹಾಕಲು ತಮ್ಮ ಮನೆ -ಮಠ, ಕುಟುಂಬದ ಬಗ್ಗೆ ಯೋಚಿಸದೇ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದವರು ಅಸಂಖ್ಯಾತ ಜನ. ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಯೊಂದು ಪ್ರದೇಶವು ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದೆ. ಈ ರೀತಿ ನೋಡಿದಾಗ ನಮ್ಮ ಕುಂದಾಪುರ ತಾಲೂಕನ್ನು ಸ್ವಾತಂತ್ರ್ಯ ಹೋರಾಟದ ನಕ್ಷೆಯಲ್ಲಿ ಸೇರಿಸಲು ಹಲವಾರು ಮಹನೀಯರು ಕಾರಣಿ ಭೂತರಾಗಿದ್ದಾರೆ.
           
ಕುಂದಾಪುರ ತಾಲೂಕಿನಲ್ಲಿ ಹಲವಾರು ಶ್ರೀಮಂತ ಮನೆತನಗಳಿದ್ದವು. ಅದರಲ್ಲಿ ಹಲ್ಸನಾಡು ಮನೆತನವು ಒಂದು. ಈ ಮನೆತನದಲ್ಲಿ 1912ರಲ್ಲಿ ಜನಿಸಿದ  ದಿ.ಹಲ್ಸನಾಡು ಸೂರಪ್ಪಯ್ಯ ಕುಂದಾಪುರ ಮತ್ತು ಮಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ. ಆ ಕಾಲದಲ್ಲಿ ಅಂತಹ ಉತ್ತಮ ಮಟ್ಟದ ವಿದ್ಯಾಭ್ಯಾಸ ಪಡೆದ ಇವರು ವಿದ್ಯಾರ್ಥಿಯಾಗಿದ್ದಾಗಲೇ ತನ್ನ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿ ಕ್ರಮೇಣ ರಾಷ್ಟ್ರೀಯ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತನಾಗಿ ಹಲವಾರು ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಮಹಾತ್ಮ ಗಾಂಧಿ, ನೆಹರು, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮೊದಲಾದ ರಾಷ್ಟ್ರೀಯ ನಾಯಕರಿಂದ ಸಾಕಷ್ಟು ಪ್ರಭಾವಿತರಾಗಿದ್ದರು.
1935 ರಲ್ಲಿ ಮಂಗಳೂರಿನಲ್ಲಿ ನಡೆದ ಎರಡನೆಯ ಕರ್ನಾಟಕದ ಪ್ರಾದೇಶಿಕ ರಾಜಕೀಯ ಪರಿಷತ್ತಿನ ಉತ್ಸಾಹೀ ಕಾರ್ಯದರ್ಶಿ ಆಗುತ್ತಾರೆ. ಅತ್ಯಂತ ಚಿಕ್ಕ ಅಂದರೆ 20ರ ಹರೆಯದಲ್ಲೇ ತೀರಿಕೊಂಡ ಇವರು ದೀರ್ಘಕಾಲ ಬದುಕಿದ್ದರೆ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಮಿಂಚುತ್ತಿದ್ದರೆನ್ನುವುದರಲ್ಲಿ ಯಾವ ಸಂಶಯವು ಸಹ ಇರಲಿಲ್ಲ.
         
ಮೊಳಹಳ್ಳಿ ಮಹಾಬಲ ಹೆಗ್ಡೆ ಆವರ್ಸೆ ಗ್ರಾಮದವರು. ನಾಲ್ಕನೇ ತರಗತಿಯ ವರೆಗಷ್ಟೇ ವಿದ್ಯಾಭ್ಯಾಸ ಪಡೆದಿದ್ದ ಇವರು ರೈತರಾಗಿ ಮನೆಯಲ್ಲಿ ಇದ್ದರೂ ಸಹ ರಾಷ್ಟ್ರೀಯ ಚಳುವಳಿಯಿಂದ ಆಕರ್ಷಿತರಾಗಿದ್ದರು.1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ರಹಸ್ಯವಾಗಿ ಗಂಗೊಳ್ಳಿ, ಕುಂದಾಪುರ, ಬೈಂದೂರು, ಕೋಟೇಶ್ವರ ಮತ್ತಿತರ ಕಡೆಗಳಲ್ಲಿ ತಂತಿ ಕಂಬಗಳನ್ನು ಉರುಳಿಸಿ ಬ್ರಿಟಿಷ್ ಸರಕಾರದ ಧೋರಣೆಗಳನ್ನು ಪ್ರತಿಭಟಿಸಿದವರು.
             
ಪ್ರಸಿದ್ಧ ಹಾಲಾಡಿ ಮನೆತನದಲ್ಲಿ ಜನಿಸಿದ, ಹಾಲಾಡಿ ಮಹಾಬಲ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದವರು. ಇವರು ಕೃಷ್ಣರಾಯ ಕೊಡ್ಗಿ, ಮಲ್ಪೆ ಶಂಕರನಾರಾಯಣ ಸಾಮಗ ಮುಂತಾದವರ ಮಾರ್ಗದರ್ಶನದಲ್ಲಿ ವಿದೇಶಿ ವಸ್ತ್ರ ಬಹಿಷ್ಕಾರ, ಮಧ್ಯಪಾನ ನಿಷೇಧ, ಮೊದಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು. ತೊಲಗಿ ಭಾರತದಿಂದ ಚಳುವಳಿಯಲ್ಲಿಯೂ ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
            
ದೇಶ ಸ್ವತಂತ್ರವಾಗಲು ಕುಂದಾಪುರದ ಕೊಡುಗೆ ಇದ್ದೆ ಇದೆ. ಅದರಲ್ಲೂ ಕುಂದಾಪುರದ ಬಸ್ರೂರಿನಲ್ಲಿ ನಾವು ಸಾಕಷ್ಟು ಹೋರಾಟಗಾರರನ್ನು ಕಾಣಬಹುದು. ಗಾಂಧಿ ರಾಮಣ್ಣ ಶೆಟ್ಟಿ ಬಸ್ರೂರಿನ ಬಳ್ಕೂರಿನವರಾದ ಇವರು 1931 ರಲ್ಲಿ ಮಹಾತ್ಮ ಗಾಂಧೀಜಿಯವರನ್ನು ಕಾಣಲು ಕರಾಚಿಗೆ ಹೋಗಿದ್ದರಂತೆ. ಗಾಂಧೀಜಿಯವರ ಮಾತು ಅವರಿಗೆ ವೇದ ವಾಕ್ಯವಾಗಿತ್ತು. ಹರಿಜನರ ಉದ್ಧಾರದ ಉದ್ದೇಶದಿಂದ ಗಾಂಧೀಜಿಯವರು ಉಪವಾಸ ಕೈಗೊಂಡಿದ್ದನ್ನು ಕೇಳಿ ತಾವು ಕೂಡ ಉಪವಾಸ ಕೈಗೊಂಡಿದ್ದ ರಾಮಣ್ಣ ಶೆಟ್ಟಿಯವರು ಗಾಂಧಿ ರಾಮಣ್ಣ ಶೆಟ್ಟಿ ಎಂದೇ ಪ್ರಸಿದ್ಧರಾದರು. ಇವರೊಂದಿಗೆ ಕಳೆಂಜೆ ರಾಮಕೃಷ್ಣ ಭಟ್, ಸೂರಪ್ಪ ಶೆಟ್ಟಿ ಬಸ್ರೂರು, ಶ್ರೀ ಗೋಪಾಲಕೃಷ್ಣ ಶೆಣೈ ಹಾಗೂ ಬಸ್ರೂರು ಸುಬ್ಬಣ್ಣ ಶೆಟ್ಟಿ ಸ್ವಾತಂತ್ರ್ಯ ಹೋರಾಟಕ್ಕೆ ಇವರೆಲ್ಲರ ಕೊಡುಗೆ ಅಪಾರವಾದುದು.
              
ಕುಂದಾಪುರದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಜನ್ಮ ತಾಳಿದ್ದರು ಮತ್ತು ಅವರು ನಡೆದಾಡಿದ ನೆಲದಲ್ಲಿ ನಾವು ಇಂದು ಜೀವನ ನಡೆಸುತ್ತಿದ್ದೇವೆ ಎನ್ನುವುದು ನಿಜಕ್ಕೂ ನಮಗೆಲ್ಲ ಹೆಮ್ಮೆಯ ಸಂಗತಿ.
                   
– ಲಾವಣ್ಯ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಭಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಕುಂದಾಪುರ.