ಈ ಬೇಸಿಗೆಗೆ ನೀವು ಕುಡಿಯಲೇಬೇಕಾದ ಟಾಪ್ 4 ಜ್ಯೂಸ್ ಗಳು ಯಾವುದು ಗೊತ್ತಾ? : ಕುಡಿದರೆ ಕುಡಿಬೇಕು ಇಂಥಾ ಜ್ಯೂಸು

ತಾಜಾ ಹಣ್ಣಿನ  ಜ್ಯೂಸ್ ರೆಡಿ ಮಾಡಿ  ಸವಿಯುವುದರ ಸುಖವೇ ಬೇರೆ. ಬೇಸಿಗೆ ಬಂತೆಂದರೆ ಸಾಕು ಕಾಡು ಹಣ್ಣುಗಳಿಂದ ಹಿಡಿದು ಎಲ್ಲಾ ಜಾತಿಯ ಹಣ್ಣುಗಳಿಗೂ ಇದು ಸಮೃದ್ಧತೆಯ ಕಾಲ. ದೇಹಕ್ಕೆ ಬೇಕಾದ ಸಕಲ ಪೌಷ್ಠಿಕಾಂಶಗಳೊಂದಿಗೆ ಮನಸ್ಸಿಗೆ ನೆಮ್ಮದಿಯನ್ನೂ ನೀಡುವ ಜ್ಯೂಸ್ ಗಳನ್ನು ಮಾಡೋದೇಗೆ, ನೀವು ಮನೆಯಲ್ಲೇ ಯಾವ ಜ್ಯೂಸ್ ಗಳನ್ನು ಮಾಡಿ ಕುಡಿಯಬಹುದು ಎನ್ನುವ ಕುರಿತು ಸುವರ್ಚಲಾ ಅಂಬೇಕರ್  ಅವರು ಒಂದಷ್ಟು ಐಡಿಯಾ ಕೊಟ್ಟಿದ್ದಾರೆ. ಜ್ಯೂಸ್ ಮಾಡಿ ಸವಿಯೋದಷ್ಟೇ ನಿಮ್ ಕೆಲಸ

ನಕ್ಷತ್ರ ಹಣ್ಣಿನ ರಸ:

ಬಿರು ಬೇಸಗೆಯ ದಾಹ ನೀಗಿಸಲು ನಕ್ಷತ್ರ ಹಣ್ಣಿನ ರಸ ಸಾಕು.ಪರಿಮಳ ಬೀರುವ ಈ ಹಣ್ಣಿನ ರಸ ನಿಯಮಿತವಾಗಿ ಕುಡಿದರೆ ಕೆಮ್ಮು, ಕಫ ಎಲ್ಲವೂ ಮಾಯ.
ಏನೇನ್ ಬೇಕು?: ದಾರೆ ಹುಳಿ ಅಥವಾ ನಕ್ಷತ್ರ ಹಣ್ಣು, ಬೆಲ್ಲ, ನೀರು, ಕಾಳುಮೆಣಸಿನ ಪುಡಿ.
ಮಾಡೋದ್ ಹೇಗೆ?: ದಾರೆ ಹುಳಿಯನ್ನು ಸಿಪ್ಪೆ ಸಮೇತ ಸಣ್ಣ ತುಂಡುಗಳಾಗಿ ಹೆಚ್ಚಿಕೊಂಡು, ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ. ನಂತರ ಪಾತ್ರೆಗೆ ಹಾಕಿ ಅಗತ್ಯವಿದ್ದಷ್ಟು ನೀರು ಹಾಗೂ ಬೆಲ್ಲವನ್ನು ಹಾಕಿ, ಅದರೊಂದಿಗೆ ಕಾಳುಮೆಣಸಿನ ಪುಡಿ ಹಾಕಿ ಕದರಿದರೆ ದಾರೆಹುಳಿ ಶರಬತ್ತು ಕುಡಿಯಲು ರೆಡಿ. ಅಗತ್ಯವಿದ್ದರೆ ಐಸ್‌ತುಂಡುಗಳನ್ನು ಹಾಕಬಹುದು.

ಬೊಂಡ ಶರಬತ್ತು

ಎಳನೀರಿನ ಶರಬತ್ತು ಕೂಡ ಸೆಖೆಗೆ ಅಮೃತ ಸಮಾನ. ಜ್ವರ, ತಲೆನೋವುಗಳಿಗೂ ರಾಮಬಾಣ.
ಏನೇನ್ ಬೇಕು?: ತೆಳು ಗಂಜಿ ಇರುವ ಎಳನೀರು, ಸಕ್ಕರೆ, ಶುಂಠಿ
ಮಾಡೋದ್ ಹೇಗೆ?: ಎಳನೀರನ್ನು ತೆಳುವಾದ ಗಂಜಿಯ ಸಮೇತ ಪಾತ್ರೆಗೆ ಹಾಕಬೇಕು. ಶುಂಠಿಯನ್ನು ಸಣ್ಣ ತುಂಡುಗಳಾಗಿ ಮಾಡಿ, ಮಿಕ್ಸಿಗೆ ಹಾಕಿ ಶುಂಠಿ ಪೇಸ್ಟ್ ತಯಾರಿಸಿಟ್ಟುಕೊಳ್ಳಬೇಕು. ಅನಂತರ ಎಳನೀರಿನ ಪಾತ್ರೆಗೆ ಸಕ್ಕರೆ ಹಾಗೂ ಶುಂಠಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ ಕುಡಿದರೆ ಬಾಯಿಗೂ ರುಚಿ ದೇಹಾರೋಗ್ಯಕ್ಕೂ ಒಳ್ಳೆಯದು.

ಕಾಮಕಸ್ತೂರಿ ಪಾನಕ


ಏನೇನ್ ಬೇಕು?: ಕಾಮಕಸ್ತೂರಿ ಬೀಜ, ನಿಂಬೆಹಣ್ಣು, ಸಕ್ಕರೆ, ಉಪ್ಪು, ನೀರು
ಮಾಡೋದ್ ಹೇಗೆ?: ಮೊದಲಿಗೆ ಒಂದು ಪಾತ್ರೆಯಲ್ಲಿ ನೀರಿಗೆ ಸಕ್ಕರೆ ಹಾಕಿ ಹದವಾದ ಮಿಶ್ರಣ ಮಾಡಿಕೊಳ್ಳಿ. ನಿಂಬೆಹಣ್ಣನ್ನು ಸಿಪ್ಪೆ ಸಮೇತ ಹೆಚ್ಚಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈಗ ನೀರು, ನಿಂಬೆಹಣ್ಣು ಹಾಗೂ ಅರ್ಧ ಗಂಟೆ ಮೊದಲೇ ನೀರಿನಲ್ಲಿ ನೆನೆಸಿಟ್ಟಿರುವ ಕಾಮಕಸ್ತೂರಿ ಬೀಜವನ್ನು ಮಿಶ್ರಣ ಮಾಡಿ. ಚಿಟಿಕೆ ಉಪ್ಪು ಸೇರಿಸಿ. ಅಗತ್ಯವಿದ್ದರೆ ಐಸ್‌ಕ್ಯೂಬ್ ಬಳಸಬಹುದು. ಇದೇ ಮಿಶ್ರಣಕ್ಕೆ ಅಂಸೋಲ್ ಅಥವಾ ಪುನ್ನಾರ್‌ಪುಳಿಯನ್ನು ಹಾಕಿ ಕುಡಿದರೆ ಹೊಸ ರುಚಿ ಸಿಗುತ್ತದೆ.

ಗೇರುಹಣ್ಣಿನ ಪಾನೀಯ:


ಏನೇನ್ ಬೇಕು?: ಗೇರು ಹಣ್ಣು, ಸಕ್ಕರೆ, ಉಪ್ಪು, ಕಾಳುಮೆಣಸಿನ ಪುಡಿ, ನೀರು.
ಮಾಡೋದ್ ಹೇಗೆ: ಮೊದಲು ಒಂದು ಪಾತ್ರೆಯಲ್ಲಿ ನೀರಿಗೆ ಸಕ್ಕರೆ ಹಾಕಿ ಹದವಾದ ಮಿಶ್ರಣ ಮಾಡಿಕೊಳ್ಳಿ. ಗೇರುಹಣ್ಣು ಸಾಕಷ್ಟಿದ್ದರೆ ಕೈಯಲ್ಲೇ ರಸ ಹಿಂಡಿ ಅದೇ ಪಾತ್ರೆಗೆ ಹಾಕಿಟ್ಟುಕೊಳ್ಳಿ, ಇಲ್ಲದಿದ್ದರೆ ಹೋಳು ಮಾಡಿಕೊಂಡು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬಹುದು. ಅನಂತರ ಒಂದು ಚಿಟಿಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಹಾಕಿ ಕದರಿದರೆ ಗೇರು ಹಣ್ಣಿನ ಶರಬತ್ತು ಕುಡಿಯಲು ರೆಡಿ.

:ಚಿತ್ರ:ಬರಹ :ಸುವರ್ಚಲಾ ಅಂಬೇಕರ್