ಉಡುಪಿ: ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರ್ ಅವರ ಜನ್ಮದಿನಾಚರಣೆಯಾದ ಮೀಲಾದುನ್ನಬಿಯನ್ನು ಮಂಗಳವಾರ ಉಡುಪಿ ತಾಲೂಕಿನಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಉಡುಪಿಯ ನೇಜಾರು, ದೊಡ್ಡಣಗುಡ್ಡೆ, ಸಂತೋಷ್ನಗರ, ತೋನ್ಸೆ-ಹೂಡೆ ಸೇರಿದಂತೆ ಹಲವು ಕಡೆಗಳಲ್ಲಿ ಮೀಲಾದ್ ಮೆರವಣಿಗೆಗಳು ವಿಜೃಂಭಣೆಯಿಂದ ನಡೆದವು. ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಅದೇ ಮಸೀದಿಗಳಿಗೆ ಮರಳುವ ಮೂಲಕ ಸಮಾಪ್ತಿಗೊಂಡವು. ಮೆರವಣಿಗೆಯಲ್ಲಿ ಪ್ರವಾದಿ ಸಂದೇಶ ಸಾರುವ ಘೋಷಣೆಗಳು, ದಫ್ ಕುಣಿತ, ಸ್ಕೌಟ್ಸ್ ಹಾಗೂ ಮದ್ರಸ ವಿದ್ಯಾರ್ಥಿಗಳು ಗಮನ ಸೆಳೆದರು.
ದೊಡ್ಡಣಗುಡ್ಡೆ ಜುಮಾ ಮಸೀದಿಯಿಂದ ಹೊರಟ ಸಂದಲ್ ಮೆರವಣಿಗೆಯು ಬುದಗಿ ಸ್ಟೋರ್ವರೆಗೆ ಸಾಗಿತು. ಬಳಿಕ ಮಸೀದಿಗೆ ಮರಳಿ ಸಮಾಪ್ತಿಗೊಂಡಿತು.

ಮೆರವಣಿಗೆಯಲ್ಲಿ ಮಕ್ಕಳ ಸ್ಕೌಟ್ಸ್ ಹಾಗೂ ದಾಯಿರ ತಂಡದ ಪ್ರದರ್ಶನ ಆಕರ್ಷಣೀಯವಾಗಿತ್ತು.
ಸಂತೋಷ್ನಗರ ಮಸೀದಿಯಲ್ಲೂ ಮೀಲಾದುನ್ನಬಿ ಅಂಗವಾಗಿ ರ್ಯಾಲಿ ನಡೆಯಿತು. ಮಸೀದಿಯಿಂದ ಹೊರಟ ಮೆರವಣಿಗೆಯು ಅಂಬಾಗಿಲುವರೆಗೆ ತೆರಳಿ ಬಳಿಕ ಮಸೀದಿಗೆ ವಾಪಸ್ಸಾಯಿತು.
ನೇಜಾರು ಜುಮಾ ಮಸೀದಿ ವತಿಯಿಂದ ವೈಭವದ ಮೀಲಾದ್ ಮೆರವಣಿಗೆ ನಡೆಯಿತು. ಮಸೀದಿಯಿಂದ ಹೊರಟ ರ್ಯಾಲಿಯು ಸಂತೆಕಟ್ಟೆಗೆ ತೆರಳಿ, ಅಲ್ಲಿಂದ ಕಲ್ಯಾಣಪುರ, ನಿಡಂಬಳ್ಳಿ ರಸ್ತೆಯ ಮೂಲಕ ಸುಮಾರು ಐದು ಕಿ.ಮೀ. ಸಂಚರಿಸಿ ನೇಜಾರು ಮಸೀದಿಗೆ ತಲುಪಿತು.
ರ್ಯಾಲಿಯುದ್ದಕ್ಕೂ ಮುಸ್ಲಿಂ ಬಾಂಧವರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯರು ತಂಪು ಪಾನೀಯ, ಸಿಹಿತಿಂಡಿಗಳನ್ನು ವಿತರಿಸಿ ಶುಭ ಹಾರೈಸಿದರು. ನೇಜಾರು ಭಜನಾ ಮಂದಿರ, ನೇಜಾರು ಕ್ರೀಡಾಂಗಣ, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ಗುರು ಕನ್ಸ್ಟ್ರಕ್ಷನ್ನ ಮಾಲಕ ಚಂದ್ರಶೇಖರ್ ಆಚಾರ್ಯ, ನಾಗೇಶ್ ಆಚಾರ್ಯ ಹಾಗೂ ಕೆಳಾರ್ಕಳಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ವತಿಯಿಂದ ಪಾನೀಯ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಈ ಮೂಲಕ ಮೀಲಾದ್ ಮೆರವಣಿಗೆಯ ಸಂದರ್ಭದಲ್ಲಿ ಸ್ಥಳೀಯರು ಕೋಮುಸೌಹಾರ್ದತೆಯ ಸಂದೇಶ ಸಾರಿದರು.















