ಪತ್ರಕರ್ತ ನಾಗೇಶ್ ಗಾಣಿಗ ನೇರಳಕಟ್ಟೆ ಹೃದಯಾಘಾತದಿಂದ ನಿಧನ

ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರ ಭಾಗದ ವಿಜಯಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತ ನಾಗೇಶ್ ಗಾಣಿಗ ನೇರಳಕಟ್ಟೆ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 40 ವರ್ಷ ವಯಸ್ಸಾಗಿತ್ತು. ನಾಗೇಶ್ ಗಾಣಿಗ ಅವರು, ಕಳೆದ ಹಲವಾರು ವರ್ಷಗಳಿಂದ ವಿಜಯಕರ್ನಾಟಕ ಪತ್ರಿಕೆಯ ವರದಿಗಾರರಾಗಿದ್ದರು.

ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ತಮ್ಮ ವರದಿಗಾರಿಕೆಯ ಮೂಲಕ ಬೆಳಕು ಚೆಲ್ಲಿದ್ದಲ್ಲದೇ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.

ಕರ್ತವ್ಯದಲ್ಲಿರುವಾಗ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಅವರನ್ನು ಕುಂದಾಪುರದ ಖಾಸಗೀ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಇಹಲೋಕ ತ್ಯಜಿಸಿದ್ದರು ಎಂದು ತಿಳಿದುಬಂದಿದೆ.

ನಾಗೇಶ್ ಗಾಣಿಗರ ನಿಧನದಿಂದ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವುಂಟಾಗಿದ್ದು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಾರ ಬಂಧು ಬಳಗ, ಸ್ನೇಹಿತರನ್ನೂ ಅಗಲಿದ್ದಾರೆ.