ಶ್ರೀಕಾಂತ ಹೆಮ್ಮಾಡಿ ಕುಂದಾಪುರ
ಕುಂದಾಪುರ: ಜೋರ್ಮಕ್ಕಿ ಬಾಬು ಶೆಟ್ಟಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿಮೂರು ಮಂದಿಯ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಸಂತೋಷ ಶೆಟ್ಟಿ, ತೇಜಪ್ಪ ಶೆಟ್ಟಿ, ಶೇಖರ ಶೆಟ್ಟಿ, ಪ್ರಕಾಶ್ ಶೆಟ್ಟಿ ಕೊಡ್ಲಾಡಿ, ಉದಯ ಶೆಟ್ಟಿ, ರವಿರಾಜ ಶೆಟ್ಟಿ, ನಾಗರಾಜ ದೇವಾಡಿಗ, ಸುಕೇಶ್ ಮೂಡುಬಗೆ, ಶಂಕರ ಶೆಟ್ಟಿ, ಸುರೇಶ್ ಶೆಟ್ಟಿ ಕೊಕ್ಕಡ, ಗೋಪಾಲ ಶೆಟ್ಟಿ ಅಸೋಡು, ಕುಷ್ಠಪ್ಪ ಶೆಟ್ಟಿ ಅಸೋಡು, ಪ್ರಸಾದ್ ಶೆಟ್ಟಿ ಸೇರಿ ಒಟ್ಟು ಹದಿಮೂರು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಬಾಬು ಶೆಟ್ಟಿಯವರ ಅಕ್ಕನ ಗಂಡ ಆನಂದ ಶೆಟ್ಟಿ ಈ ಹಿಂದೆ ಕರ್ಕುಂಜೆ ಗ್ರಾಮದ ಕಮ್ರಾಡಿ ಎಂಬಲ್ಲಿ ಕೃಷಿ ಜಮೀನೊಂದನ್ನು ಖರೀದಿಸಿದ್ದರು. ಇದೇ ಜಾಗಕ್ಕೆ ಸಂಬಂಧಿಸಿದಂತೆ ಕುಮ್ಕಿ ಜಾಗವೊಂದರ ಎಗ್ರಿಮೆಂಟ್ ವಿಚಾರದಲ್ಲಿ ಆರೋಪಿತರಿಗೂ ಹಾಗೂ ಆನಂದ ಶೆಟ್ಟಿಯವರ ನಡುವೆ ಗಲಾಟೆಗಳಾಗಿತ್ತು. ಈ ಸಮಯದಲ್ಲಿ ಬಾಬು ಶೆಟ್ಟಿಯವರು ಅಕ್ಕ ಹಾಗೂ ಬಾವನ ಪರ ಸಂಧಾನಕ್ಕೆ ಹೋಗಿದ್ದು, ಬಾವ ಆನಂದ ಶೆಟ್ಟಿಯವರ ಪರ ನಿಂತು ಮಾತನಾಡಿದ್ದರು. ಇದೇ ದ್ವೇಷದಿಂದ ಹತ್ಯೆಗೈದಿದ್ದಾರೆ ಎಂದು ಮೃತ ಬಾಬು ಶೆಟ್ಟಿಯವರ ಸಹೋದರ ಪ್ರಕಾಶ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರ ನೀಡಿದ ದೂರಿನ ಆಧಾರದಲ್ಲಿ ಹದಿಮೂರು ಮಂದಿ ಆರೋಪಿಗಳ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ೩೪೧, ೧೪೩, ೧೪೭, ೧೪೮, ೩೦೨ ಸೇರಿದಂತೆ ೧೪೯ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:
ಮಂಗಳವಾರ ಬೆಳಗ್ಗೆ ಮನೆಯ ತೋಟಗಳಿಗೆ ನೀರು ಹಾಯಿಸಿ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಜೋರ್ಮಕ್ಕಿಯ ತನ್ನ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಬೈಕ್ನಲ್ಲಿ ತೆರಳಿದ್ದ ಕೆಲವೇ ಹೊತ್ತಿನಲ್ಲಿ ಬಾಬು ಶೆಟ್ಟಿಯವರ ಹತ್ಯೆ ನಡೆದಿತ್ತು. ಬೈಕ್ನಲ್ಲಿ ತೆರಳುತ್ತಿದ್ದ ಅವರನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಗೇರು ಹಾಡಿಯೊಂದರ ಬಳಿಯಲ್ಲಿ ರಕ್ತ ಸಿಕ್ತ ದೇಹ ಬಿದ್ದಿದ್ದರೇ, ಅವರ ಬೈಕ್ ಗೇರು ತೋಪಿನ ಇನ್ನೊಂದು ತುದಿಯನ್ನು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಬಿದ್ದಿತ್ತು. ಹತ್ಯೆಯಾದ ಬಾಬು ಶೆಟ್ಟಿಯವರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಇರಿತದ ಗುರುತುಗಳು ಪತ್ತೆಯಾಗಿದ್ದು, ಕೊಲೆಯ ಭೀಕರತೆಯನ್ನು ಎತ್ತಿತೋರಿಸಿತ್ತು.
ಇನ್ನೊಂದು ಚಪ್ಪಲಿ ಪತ್ತೆ!: ಟ್ವಿಸ್ಟ್:
ಬಾಬು ಶೆಟ್ಟಿಯವರ ಹೀರೋಹೊಂಡಾ ಬೈಕ್ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೈಕ್ನ ಸಮೀಪವೇ ಹೆಲ್ಮೆಟ್ ಹಾಗೂ ಅವರ ಒಂದು ಸ್ಲಿಪ್ಪರ್ ಪತ್ತೆಯಾಗಿತ್ತು. ಗೇರು ತೋಪಿನಲ್ಲಿ ಬಾಬು ಶೆಟ್ಟಿ ಬಳಸುತ್ತಿದ್ದ ಕನ್ನಡಕ ಹಾಗೂ ಮೊಬೈಲ್ಫೋನ್ ಪತ್ತೆಯಾದರೆ, ಅವರು ಧರಿಸಿದ್ದ ಪಂಚೆ ಹಾಗೂ ಇನ್ನೊಂದು ಸ್ಲಿಪ್ಪರ್ ಪತ್ತೆಯಾಗಿರಲಿಲ್ಲ. ಉಡುಪಿ ಎಸ್ಪಿ ನಿಶಾ ಜೇಮ್ಸ್ ಸ್ಥಳಕ್ಕಾಗಮಿಸಿ ಗೇರುತೋಪಿನೊಳಗೆ ಕೂಂಬಿಂಗ್ ನಡೆಸಲು ಆದೇಶಿಸಿದ ಬಳಿಕ ಪೊಲೀಸರ ತಂಡ ಹುಡುಕಾಟ ನಡೆಸಿದ ವೇಳೆಯಲ್ಲಿ ಗೇರುತೋಪಿನಲ್ಲಿ ಬಾಬು ಶೆಟ್ಟಿಯವರು ಧರಿಸಿದ್ದ ಪಂಚೆ, ಸ್ಲಿಪ್ಪರ್ ಹಾಗೂ ಇನ್ನೊಂದು ಚಪ್ಪಲಿ ಪತ್ತೆಯಾಗಿರುವ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇನ್ನು ಕಾರ್ಯಾಚರಣೆಯ ವೇಳೆ ಸಿಕ್ಕ ಇನ್ನೊಂದು ಚಪ್ಪಲಿ ಯಾರದ್ದೆನ್ನುವುದು ಪೊಲೀಸರು ಇನ್ನೂ ಖಾತರಿಪಡಿಸಲಿಲ್ಲ.
ಕಲ್ಕಂಬ ರಸ್ತೆ ಡೇಂಜರ್ ಸ್ಪಾಟ್:
ಜಾಡಿಯಿಂದ ನೇರಳಕಟ್ಟೆಗೆ ಸಂಪರ್ಕ ಕಲ್ಪಿಸುವ ಗೇರುತೋಪಿನ ಮಧ್ಯೆ ಹಾದುಹೋಗುವ ಒಂದುವರೆ ಕಿಮೀ ಉದ್ದದ ಕಲ್ಕಂಬ ರಸ್ತೆ ಇತ್ತೀಚೆಗೆ ಡೇಂಜರ್ ರಸ್ತೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕಳೆದ ಒಂದೆರಡು ವರ್ಷಗಳಿಂದೀಚೆಗೆ ಈ ರಸ್ತೆಯಲ್ಲಿ ಅನೈತಿಕ ಚಟುವಟಿಕೆಗಳು, ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು. ಅಲ್ಲದೇ ಇತ್ತೀಚನ ದಿನಗಳಲ್ಲಿ ಈ ರಸ್ತೆಯಲ್ಲಿ ತಿರುಗಾಡುವ ವಾಹನ ಸವಾರರನ್ನು ಅಡ್ಡಗಟ್ಟಿ ಹಣ ಲಪಟಾಯಿಸುವ ಜಾಲವೊಂದು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿಬಂದಿವೆ. ಶಾಸಕರು ಹಾಗೂ ಸ್ಥಳೀಯಾಡಳಿತ ಜನಸಂಚಾರಕ್ಕೆ ಅಗತ್ಯವಿರುವ ಕಲ್ಕಂಬ ರಸ್ತೆಯನ್ನು ಅಭಿವೃದ್ದಿಪಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಸಾದ್ ಶೆಟ್ಟಿ ಯಾರು?
ಎಫ್ಐಆರ್ ದಾಖಲಾದ ಹದಿಮೂರು ಮಂದಿಯಲ್ಲಿ ಬಾಬು ಶೆಟ್ಟಿಯವರ ತಮ್ಮ ಪ್ರಸಾದ್ ಶೆಟ್ಟಿಯವರ ಹೆಸರೂ ಇದೆ. ಈತ ಈ ಹಿಂದೆ ನಡೆದ ಚೂರಿ ಇರಿತ ಪ್ರಕರಣವೊಂದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜಾಮೀನು ಪಡೆಯದೆ ತಲೆಮರೆಸಿಕೊಂಡಿದ್ದಾನೆ. ಆದರೆ ಈ ಪ್ರಕರಣದಲ್ಲಿ ಪ್ರಸಾದ್ ಭಾಗಿಯಾಗಿದ್ದಾರೆಯೇ ಎನ್ನುವ ಸ್ಪಷ್ಟ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.