ಕುಂದಾಪುರ: ಭರತ್ ಹಾಗೂ ಯತೀಶ್ ಮೇಲೆ ತಲವಾರಿನಿಂದ ದಾಳಿ ನಡೆಸಿ ಕೊಲೆಗೈದಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಕೋಟ ರಾಷ್ಟ್ರೀಯ ಹೆದ್ದಾರಿ ಸಮೀಪ ಇಬ್ಬರ ಶವವಿಟ್ಟು ಭಾನುವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಶನಿವಾರ ತಡರಾತ್ರಿ ತಲವಾರು ದಾಳಿಯಿಂದಾಗಿ ಸಾವನ್ನಪ್ಪಿದ ಯತೀಶ್ ಹಾಗೂ ಭರತ್ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಣಿಪಾಲ ಆಸ್ಪತ್ರೆಯಲ್ಲಿ ನಡೆಯಿತು. ಭಾನುವಾರ ಸಂಜೆ ಆಸ್ಪತ್ರೆಯಿಂದ ನೇರವಾಗಿ ಕೋಟ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಇಬ್ಬರ ಶವವಿಟ್ಟು ವಿವಿಧ ಸಂಘ ಸಂಸ್ಥೆಗಳು, ಸ್ನೇಹಿತರು, ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವುದು ಏನಿತ್ತು. ಏನಿದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಕೂಡಲೇ ರೌಡಿಶೀಟರ್ ಹರೀಶ್ ರೆಡ್ಡಿ ಹಾಗೂ ಆತನ ಸಹಚರರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಇಬ್ಬರನ್ನು ಮನಸೋಇಚ್ಛೆ ತಲವಾರಿನಿಂದ ದಾಳಿ ನಡೆಸಿ ಕೊಲೆಗೈದ ಕೊಲೆಗಡುಕರನ್ನು ಗಡಿಪಾರು ಮಾಡಬೇಕೆಂದು ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಎಸ್ಪಿ ಸ್ಥಳಕ್ಕೆ ಬರುವಂತೆ ಪಟ್ಟು:
ಸುಮಾರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿಯವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಉಡುಪಿ ಡಿವೈಎಸ್ಪಿ ಜಯಶಂಕರ್ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ನಡೆಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಎಸ್ಪಿ ಸ್ಥಳಕ್ಕೆ ಬರಬೇಕು, ನಾವು ಅವರೊಂದಿಗೆ ಮಾತನಾಡಬೇಕು ಎಂದು ಮನವಿ ಮಾಡಿಕೊಂಡರು. ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಸ್ಥಳಕ್ಕೆ ಬಂದು ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ಪ್ರಕರಣದ ಕುರಿತು ಭಾನುವಾರ ನಸುಕಿನ ಜಾವವೇ ಸಭೆ ನಡೆಸಿ ಉಡುಪಿ ಡಿವೈಎಸ್ಪಿ ಜಯಶಂಕರ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದೇವೆ. ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದು, ಶೀಘ್ರವೇ ಬಂಧಿಸುತ್ತೇವೆಂದ ಬಳಿಕ ಪ್ರತಿಭಟನೆ ಕೈಬಿಟ್ಟು ಇಬ್ಬರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.