ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಿಗೂ ಮಹತ್ವ ನೀಡುತ್ತಿರುವುದು ಅಭಿನಂದನಾರ್ಹ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಡಿ.23 ರಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕರಾವಳಿ ನೀಡಿದ ಕೊಡುಗೆ ಅಪಾರ. ಇಲ್ಲಿನ ವಿದ್ಯಾಸಂಸ್ಥೆಗಳಲ್ಲಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಾ.ಸುಧಾಕರ್ ಶೆಟ್ಟಿಯವರು ಮಹತ್ಕಾರ್ಯಗಳನ್ನು ಮಾಡುತ್ತಿದ್ದು, ಇಂತಹ ಸಂಸ್ಥೆಗೆ ಭೇಟಿ ನೀಡುತ್ತಿರುವುದು ಸಂತೋಷ ತಂದಿದೆ. ಶಿಕ್ಷಣ ಸಚಿವನಾಗಿ 76 ಸಾವಿರ ಶಾಲೆಗಳ ಜವಾಬ್ದಾರಿ ನನ್ನ ಮೇಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಎಲ್ಲವನ್ನೂ ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಸಂಸ್ಥೆಯು ಸಮಾಜಮುಖಿ ಕಾರ್ಯ ಹಾಗೂ ಶೈಕ್ಷಣಿಕ ಸಾಧನೆ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್ ಕುಮಾರ್ ಮಾತನಾಡಿ ಊರಿನ ಶಾಲೆ ರಾಜ್ಯಮಟ್ಟದ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿರುವುದು ಗೌರವದ ವಿಚಾರ ಎಂದರು.
ಈ ಸಂದರ್ಭದಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಒಟ್ಟು 8.2 ಲಕ್ಷ ಪ್ರೋತ್ಸಾಹ ಧನ ವಿತರಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಟ್ರಸ್ಟ್ ವತಿಯಿಂದ ಭಾರತೀಯ ಸೇನೆಗೆ 2.16 ಲಕ್ಷ ದೇಣಿಗೆ ನೀಡಲಾಯಿತು.
ಪ್ರಕಾಶಿನಿ ಜಿ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪನ್ಯಾಸಕಿ ಸಂಗೀತಾ ಕುಲಾಲ್ ನಿರೂಪಿಸಿದರು. ಟ್ರಸ್ಟಿ ಅನಿಲ್ ಕುಮಾರ್ ವಂದಿಸಿದರು.