ಉಡುಪಿ, ಜೂ.25: ಆಧಾರ್ ಕಾರ್ಡ್ ಸೇವೆ ಸಾರ್ವಜನಿಕರಿಗೆ ಸರಿಯಾಗಿ ಸಿಗದೇ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಜಿ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಜಿ.ಪಂ.ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ 16ನೇ ಜಿಲ್ಲಾ ಪಂ. ಸಾಮಾನ್ಯ ಸಭೆಯಲ್ಲಿ ಆಧಾರ್ಕಾರ್ಡ್ ಸಮಸ್ಯೆ ಕುರಿತು ಚರ್ಚೆ ನಡೆಯಿತು.
ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಲ್ಲಿ ಸಾಫ್ಟವೇರ್ ಸಮಸ್ಯೆ ಉಂಟಾಗಿದೆ ಎನ್ನುವ ಕಾರಣ ನೀಡಿದ್ದು, ಆಧಾರ್ ಸೇವೆ ಸ್ಥಗಿತಗೊಂಡಿದೆ. ತಾಲೂಕು ಕಚೇರಿ, ಅಂಚೆ ಕಚೇರಿಯಲ್ಲಿಯೂ ಸರಿಯಾದ ಸೇವೆ ಸಿಗುತ್ತಿಲ್ಲ. ಪರಿಣಾಮ ಮಕ್ಕಳ ಶಾಲಾ ದಾಖಲಾತಿಗೆ, ಉದ್ಯೋಗಿಗಳು ಪಿಎಫ್ ಪಡೆದುಕೊಳ್ಳಲು, ಇತರೆ ಕಂದಾಯ ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಆದಾರ್ ಸಮಸ್ಯೆ ರಾಜ್ಯದಾದ್ಯಂತ ಎದುರಾಗಿದ್ದು, ಸರಕಾರದ ಮಟ್ಟದಲ್ಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿ.ಪಂ ಸಿಇಒ ಸಿಂದೂ ಬಿ.ರೂಪೇಶ್ ಹೇಳಿದರು.
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸುವುದಾಗಿ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಿದರೇ ಟೋಲ್ ಸಂಸ್ಥೆಗೆ ನಷ್ಟವಾಗುವುದಿಲ್ಲ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಟೋಲ್ ವಿನಾಯಿತಿ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಮಳೆಗಾಲ ಪರಿಸ್ಥಿತಿ ನಿಭಾಯಿಸಲು ಬಹುತೇಕ ಪಂಚಾಯಿತಿಗಳು ಸಿದ್ದವಾಗಿಲ್ಲ ಎಂದು ಸದಸ್ಯ ಜನಾರ್ದನ ತೋನ್ಸೆ ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲ ಪರಿಸ್ಥಿತಿ ಎದುರಿಸಲು ಪೂರ್ವಸಿದ್ಧತಾ ಸಭೆ, ಮುಂಜಾಗ್ರತ ಕ್ರಮಗಳ ಬಗ್ಗೆ ನಡೆದಿದೆ. ಸಭೆ ಮಾಡದ ಗ್ರಾ.ಪಂಗಳ ಬಗ್ಗೆ ಪರಿಶೀಲಿಸಿ ಸೂಚನೆ ನೀಡಲಾಗುವುದು ಎಂದು ಸಿಇಒ ಸಿಂದೂ ರೂಪೇಶ್ ಹೇಳಿದರು.
ಎನ್ಎಚ್ 66 ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತ ಹೆಚ್ಚಳವಾಗುತ್ತಿದೆ ಎಂದು ಜಿ.ಪಂ ಸದಸ್ಯರು ದೂರಿದರು.
ಗುತ್ತಿಗೆ ನಿರ್ವಹಿಸಿದ ಸಂಸ್ಥೆ, ಹೆದ್ದಾರಿ ಇಲಾಖೆ ಎಂಜಿನಿಯರ್ಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ, ಉದಯ ಎಸ್.ಕೊಟ್ಯಾನ್, ಶಶಿಕಾಂತ ಪಡುಬಿದ್ರಿ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ವಿವಿಧ ಜಿ.ಪಂ. ಸದಸ್ಯರು ಉಪಸ್ಥಿತರಿದ್ದರು.