ಬಿಆರ್‌ಎಸ್ ಜೊತೆ ಮೈತ್ರಿ ಮಾಡಲಿರುವ ಜೆಡಿಎಸ್: ರಾಜಕೀಯ ಏಕಸ್ವಾಮ್ಯ ಕೊನೆಗಾಣಿಸಲು ನಿರ್ಧಾರ

ಹೈದರಾಬಾದ್: ಜನತಾ ದಳ ಜಾತ್ಯಾತೀತ(ಜೆಡಿಎಸ್) ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಜೊತೆ ಸಕ್ರಿಯವಾಗಿ ಕೆಲಸ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬುಧವಾರ ಹೇಳಿದ್ದಾರೆ. ಎರಡು ದಶಕಗಳಷ್ಟು ಹಳೆಯದಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಾಷ್ಟ್ರೀಯ ರಂಗಕ್ಕೆ ಪ್ರವೇಶಿಸಲು ಭಾರತ್ ರಾಷ್ಟ್ರ ಸಮಿತಿ ಎಂದು ಮರುನಾಮಕರಣ ಹೊಂದಿದೆ.

ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗಳು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಆರ್‌ಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ.

ಕುಮಾರಸ್ವಾಮಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಹೊರಬಿದ್ದಿದೆ.

2023ರ ಚುನಾವಣೆಯ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ಹೊರತುಪಡಿಸಿ ಸ್ವತಂತ್ರ ಸರ್ಕಾರವನ್ನು ರಚಿಸಲು ಎರಡೂ ಪಕ್ಷಗಳು ಶ್ರಮಿಸಲಿವೆ. ಕೆಸಿಆರ್ ನಮಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಸ್ವಾಭಿಮಾನದ ಸರ್ಕಾರ ಬೇಕು. ಈ ನಿಟ್ಟಿನಲ್ಲಿ ನಾವಿಬ್ಬರೂ ಚರ್ಚಿಸಿದ್ದೇವೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಬಿಆರ್‌ಎಸ್ ಸ್ಥಾಪನೆಯನ್ನು ಸ್ವಾಗತಿಸಿದ ಕುಮಾರಸ್ವಾಮಿ, ದೇಶದಲ್ಲಿನ ‘ರಾಜಕೀಯ ಏಕಸ್ವಾಮ್ಯ’ವನ್ನು ಕೊನೆಗಾಣಿಸಲು ಹೊಸ ರಾಜಕೀಯ ಶಕ್ತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.