ಕುಂದಾಪುರ: ಪಕ್ಷೇತರ ಶಾಸಕನಾಗಿದ್ದ ವೇಳೆಯಲ್ಲಿ ವೀರೋಧಪಕ್ಷದ ಸ್ಥಾನದಲ್ಲಿ ನನ್ನನ್ನು ಮೊದಲ ಬೆಂಚಿನಲ್ಲಿ ಕೂರಿಸಿ ಎಲ್ಲಾ ವಿಷಯದಲ್ಲೂ ಮಾತನಾಡಲು ಅವಕಾಶ ನೀಡಿದ್ದರು. ಜಯಪ್ರಕಾಶ್ ಹೆಗ್ಡೆ ಹೆಸರು ಇಡೀ ರಾಜ್ಯಕ್ಕೆ ಪರಿಚಯವಾಗಿದ್ದು ಆ ದಿನಗಳಲ್ಲಿ. ೨ ಬಾರಿ ಪಕ್ಷೇತರ ಶಾಸಕನಾಗಿ ಸೇವೆ ಸಲ್ಲಿಸಿದ್ದ ದಿನಗಳೇ ರಾಜಕೀಯದಲ್ಲಿ ನನಗೆ ತುಂಬಾ ಖುಷಿ ಕೊಟ್ಟ ದಿನಗಳಾಗಿದ್ದವು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಗುರುವಾರ ಬೆಳಗ್ಗೆ ಕುಂದಾಪುರದ ಶರೋನ್ ಹೋಟೇಲ್‌ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವೆ:
ಚುನಾವಣೆಯಲ್ಲಿ ಆಯ್ಕೆಯಾದವರು ಚುನಾಯಿತ ಪ್ರತಿನಿಧಿಗಳಾದರೇ, ಜನರೊಂದಿಗೆ ಇದ್ದು ಜನರ ಸಮಸ್ಯೆ ಹಾಗೂ ಭಾವನೆಗಳಿಗೆ ಸ್ಪಂದಿಸುವವರು ನಿಜವಾದ ಜನಪ್ರತಿನಿಧಿಗಳಾಗುತ್ತಾರೆ. ಅಧಿಕಾರ ಇದ್ದಾಗ ಯಾವ ರೀತಿ ಕೆಲಸ ಮಾಡಿದ್ದೆನೋ, ಈಗಲೂ ಹಾಗೆ ಕೆಲಸ ಮಾಡುತ್ತಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸಲು ಅಧಿಕಾರ ಬೇಕಂತಿಲ್ಲ. ನಾನು ಮಾಡಿದ ಕೆಲಸ, ಜನಾಭಿಪ್ರಾಯ ಅದು ಮತಗಳಾಗಿ ಪರಿವರ್ತನೆ ಆಗುತ್ತಿಲ್ಲ. ಈಗಲೂ ಕೆಲವರು ಜನರು ತಿರಸ್ಕರಿಸಿದ ಮೇಲೆ ನೀವ್ಯಾಕೆ ಅವರ ಕೆಲಸ ಮಾಡುತ್ತೀರಿ ಎಂದು ಕೇಳಿದ್ದುಂಟು.
ನನ್ನಿಂದ ಆದ ಕೆಲಸಕ್ಕೆ ತೃಪ್ತಿ ಇದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ. ಜನರು ತಿರಸ್ಕರಿಸಿದ್ದಾರೆಂದು ಮನೇಲೆ ಕೂತರೆ ಬೇಗ ಮುದುಕನಾಗಿ ಬಿಡುತ್ತೇನೆ. ರಾಜಕಾರಣದಲ್ಲಿ ನಿವೃತ್ತಿ ಪಡೆಯುವ ಆಸೆ ನನಗಿಲ್ಲ. ನಿರಂತರವಾಗಿ ಜನರ ಕೆಲಸ ಮಾಡಿಸಿಕೊಡುತ್ತೇನೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗುವ ಕೆಲಸಗಳಿಗಾಗಿ ಸಂಬಂಧಿಸಿದ ಕೇಂದ್ರ ಭಾಗಕ್ಕೆ ಹೋಗಿ ಮನವರಿಕೆ ಮಾಡುವ ವೇಳೆಯಲ್ಲಿ ಒಳ್ಳೆಯ ಮನಸ್ಸಿನ ಅಧಿಕಾರಿಗಳು ಇದ್ದಲ್ಲಿ ಬೇಡಿಕೆಗಳಿಗೆ ಶೀಘ್ರ ಸ್ಪಂದನ ದೊರಕುತ್ತದೆ. ಈ ಭಾಗದ ಪ್ರಮುಖ ಸಮಸ್ಯೆಗಳಾದ ಮರಳು ಹಾಗೂ ಡೀಮ್ಡ್‌ಫಾರೆಸ್ಟ್ ಸಮಸ್ಯೆಯ ಕುರಿತು ಶಾಶ್ವತವಾದ ಪರಿಹಾರ ಕಾಣಬೇಕಾದ ಅನಿವಾರ್ಯತೆ ಇದೆ. ಒಂದು ಸರ್ವೇ ನಂಬರ್‌ನ ಕೆಲ ಭಾಗಗಳು ಡೀಮ್ಡ್‌ಫಾರೆಸ್ಟ್‌ನಲ್ಲಿ ಬಂದರೇ, ಆ ಸರ್ವೇ ನಂಬರ್‌ನಲ್ಲಿ ಎಲ್ಲ ಜಾಗವೂ ಡೀಮ್ಡ್‌ಫಾರೆಸ್ಟ್ ವ್ಯಾಪ್ತಿಗೆ ಒಳಪಡುವ ಅವೈಜ್ಞಾನಿಕ ಕ್ರಮಗಳಿವೆ. ಮೂಕಾಂಬಿಕಾ ಅಭಯಾರಣ್ಯವನ್ನು ಈಗಾಗಲೇ ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸಲಾಗಿದೆ. ಕುದುರೆಮುಖ ಹಾಗೂ ಸೋಮೇಶ್ವರ ಅರಣ್ಯ ಪ್ರದೇಶಗಳಿಗೂ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ಆಕ್ಷೇಪಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಫ್ಲೈಓವರ್ ಅಗತ್ಯ ಕುಂದಾಪುರಕ್ಕಿದೆ: ಸಂಸದೆಗೆ ಜೆಪಿ ತಿರುಗೇಟು
ಕುಂದಾಪುರಕ್ಕೆ ಫ್ಲೈಓವರ್ ಅಗತ್ಯವಿದೆಯಾ ಎನ್ನುವ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಉತ್ತರಿಸಿದ ಜೆ.ಪಿ ಹೆಗ್ಡೆ, ಇಡೀ ಉಡುಪಿ ಜಿಲ್ಲೆಯಲ್ಲಿರುವುದು ಒಂದೇ ಫ್ಲೈಓವರ್. ಶಾಸ್ತ್ರೀ ವೃತ್ತದಲ್ಲಿರುವ ಫ್ಲೈಓವರ್ ಅನ್ನು ಬಸ್ರೂರು ಮೂರುಕೈ ತನಕವೂ ವಿಸ್ತರಿಸಲು ಶ್ರಮ ವಹಿಸಿದ್ದೆ. ಆದರೆ ಆ ದಿನಗಳಲ್ಲಿ ಅದು ಸಾಧ್ಯವಾಗಿಲ್ಲ. ಶಾಸ್ತ್ರಿ ಸರ್ಕಲ್‌ನಲ್ಲಿ ನಿಗದಿತ ಅವಧಿಯ ಒಳಗೆ ಫ್ಲೈ ಓವರ್ ಕಾಮಗಾರಿ ಪೂರ್ತಿಗೊಂಡಿದ್ದರೆ ಯಾರೂ ಈ ಕುರಿತು ಮಾತನಾಡುತ್ತಿರಲಿಲ್ಲ.
ಇದೀಗ ಫ್ಲೈ ಓವರ್ ಬೇಕಿತ್ತೇ ಎನ್ನುವ ಜಿಜ್ಞಾಸೆಗಳನ್ನು ಅನಗತ್ಯವಾಗಿ ಹುಟ್ಟಿ ಹಾಕಲಾಗುತ್ತಿದೆ. ಕುಂದಾಪುರ ನಗರದ ಮುಂದಿನ ೫೦ ವರ್ಷಗಳ ಬೆಳವಣಿಗೆ ಹಾಗೂ ಹೆಚ್ಚಾಗುವ ವಾಹನ ಸಾಂದ್ರತೆಗೆ ಅನುಗುಣವಾಗಿ ಪ್ಲೈ ಓವರ್ ಅಗತ್ಯ ಇಲ್ಲಿಗೆ ಇದೆ. ನಾನು ಸಂಸದನಾಗಿದ್ದ ವೇಳೆ ಪಡುಬಿದ್ರೆಯಿಂದ ಕುಂದಾಪುರದವರೆಗಿನ ಚತುಷ್ಫಥ ಕಾಮಗಾರಿಗೆ ಸಂಬಂಧಿಸಿದ ಹೆಚ್ಚುವರಿ ಪ್ರಾಸ್ತಾಪಗಳನ್ನು ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಶ್ರಮ ವಹಿಸಿರುವುದು ನಿಜ. ಸ್ಥಳೀಯ ಜನರ ಅಪೇಕ್ಷೆಗೆ ಅನುಗುಣವಾಗಿ ಸ್ಪಂದಿಸಿದ್ದೇನೆ ಎನ್ನುವ ತೃಪ್ತಿ ಇದೆ. ಬದಲಾಗಿರುವ ಕಾಲಘಟ್ಟದಲ್ಲಿ ಪ್ರಾಸ್ತಾವಿತ ಯೋಜನೆಗಳನ್ನು ಪೂರ್ತಿಗೊಳಿಸುವ ಹೊಣೆಗಾರಿಗೆ ಎಲ್ಲರಿಗೂ ಇದೆ ಎಂದು ಜೆ.ಪಿ ಹೆಗ್ಡೆ ಹೇಳಿದರು.
ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹಾಗೂ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ಇದ್ದರು.