ಜಯಪ್ರಕಾಶ್ ಹೆಗ್ಡೆಯಿಂದ ಆಸ್ಕರ್ ಭೇಟಿ ಕಾಂಗ್ರೆಸ್ ಗೆ ಮರಳುತ್ತಾರೆ ಹೆಗ್ಡೆ?

ಉಡುಪಿ: ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮೊದಲ ಬಾರಿಗೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇವರಿಬ್ಬರ ಭೇಟಿಗೆ ವೇದಿಕೆಯಾಗಿದ್ದು ಮಾತ್ರ ಇತ್ತೀಚೆಗೆ ನಿಧನರಾದ ಶಿರ್ತಾಡಿ ವಿಲಿಯಂ ಪಿಂಟೋ ಅವರ ಶ್ರದ್ಧಾಂಜಲಿ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಆಸ್ಕರ್, ಹೆಗ್ಡೆ ಮಾತ್ರವಲ್ಲದೆ ವಿನಯಕುಮಾರ್ ಸೊರಕೆ ಹಾಗೂ ಇತರ ಕಾಂಗ್ರೆಸ್ ಮುಖಂಡರು, ಪಿಂಟೊ ಅವರ ಒಡನಾಡಿಗಳು ಭಾಗವಹಿಸಿದ್ದರು.
ಮೂರು ವರ್ಷಗಳ ಹಿಂದೆ ಸ್ಥ ಳೀಯಾಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಬಂಡಾಯವಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿತ್ತು. ಅಲ್ಲದೆ ಈ ಚುನಾವಣೆಯಲ್ಲಿ ಹೆಗ್ಡೆ ಸೋಲು ಕಂಡಿದ್ದರು. ಈ ಘಟನೆ ಆದ ಬಳಿಕ ಇದೇ ಮೊದಲ ಬಾರಿಗೆ ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಗೆ ಮರಳುತ್ತಾರ ಹೆಗ್ಡೆ?.:
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ಹೆಗ್ಡೆ ಅವರ ಈ ಭೇಟಿ‌ ಹೆಚ್ಚು ಮಹತ್ವ ಪಡೆದುಕೊಂಡಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿರುವ ಹೆಗ್ಡೆ ಅವರಿಗೆ ಇನ್ನು ಟಿಕೆಟ್ ಕೊಡುವ ಬಗ್ಗೆ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ. ಅಲ್ಲದೆ ಬಿಜೆಪಿಯ ಟಿಕೆಟ್ ಗಾಗಿ ಹೆಗ್ಡೆ ಹಾಗೂ ಹಾಲಿ ಸಂ ಶೋಭಾ ಕರಂದ್ಲಾಜೆ ಅವರ ಮಧ್ಯೆ ಈಗಾಗಲೇ ಭಾರೀ ಪೈಪೋಟಿ ಶುರುವಾರವಾಗಿದೆ. ಅಲ್ಲದೆ ಒಂದು ಮೂಲಗಳ ಪ್ರಕಾರ ಶೋಭಾ ಅವರಿಗೆ ಟಿಕೆಟ್ ಪಕ್ಕಾ ಆಗಿದೆ ಎಂಬ ಮಾತು ಕೇಳಿಬರುತ್ತಿದೆ.
ಈ ಎಲ್ಲ ವಿದ್ಯಮಾನಗಳ ನಡುವೆ ಆಸ್ಕರ್ ಹಾಗೂ ಹೆಗ್ಡೆ ಅವರ ಭೇಟಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಹೆಗ್ಡೆ ಅವರು‌ ಮತ್ತೆ ಕಾಂಗ್ರೆಸ್ ಗೆ ಮರಳುತ್ತಾರ ಎಂಬ ಅಂಶಕ್ಕೆ ಇವರಿಬ್ಬರ ಭೇಟಿ ಸಾಕಷ್ಟು ಪುಷ್ಟಿ ನೀಡಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗುತ್ತಾರ ಜೆ.ಪಿ:
ದಿನೇ ದಿನೇ ಲೋಕಸಭೆ ಚುನಾವಣೆಯ ಕಾವು ಹೆಚ್ಚಾಗುತ್ತಿದಂತೆ ಉಡುಪಿ-ಲೋಕಸಭೆ ಚುನಾವಣೆ ಕ್ಷೇತ್ರದ ಅಭ್ಯರ್ಥಿಗಳು ಯಾರು ಎಂಬ ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ನವರು ಜೆಡಿಎಸ್ ಗೆ ಬಿಟ್ಟುಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹಾಗಾದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕಾಂಗ್ರೆಸ್ ಬೆಂಬಲ ನೀಡಿದಲ್ಲಿ ಸ್ಪರ್ಧಿಸುತ್ತೇನೆ ಎಂಬ ಭರವಸೆಯನ್ನು ಹೆಗ್ಡೆ ಅವರು ಜೆಡಿಎಸ್ ನ ವರಿಷ್ಠರಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಹೆಗ್ಡೆ ಅವರು ಯಾವುದೇ ಅಧಿಕೃತ ತೀರ್ಮಾನ ಕೈಗೊಂಡಿಲ್ಲ ಹಾಗೂ ಬಿಜೆಪಿ ತೊರೆಯುವ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಈ ನಡುವೆ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಹಿರಿಯ ಮುಖಂಡರನ್ನು ಭೇಟಿ ಮಾಡಿರುವುದು ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.