ಜವಾನ್​ ನಟನ ಫ್ಯಾನ್ಸ್ ಫುಲ್​ ಖುಷ್​: ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದ ಶಾರುಖ್​ ಖಾನ್​​

ದಕ್ಷಿಣ ಚಿತ್ರರಂಗದ ಯಶಸ್ವಿ ನಿರ್ದೇಶಕ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದ ಜವಾನ್​ ಸಿನಿಮಾವನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ.ಜವಾನ್​ ಸಿನಿಮಾಗೆ ಸಿಕ್ಕ ಸಕಾರಾತ್ಮಕ ಸ್ಪಂದನೆಗೆ ಶಾರುಖ್​ ಖಾನ್​ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಎಲ್ಲರ ಗಮನ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಕೇಂದ್ರೀಕೃತವಾಗಿದೆ. ಭಾರತೀಯ ಗಲ್ಲಾಪಟ್ಟಿಯಲ್ಲಿ 75 ಕೋಟಿ ರೂ. ಸೇರಿದಂತೆ ವಿಶ್ವಾದ್ಯಂತ ಒಟ್ಟು 100 ಕೋಟಿ ರೂ. ಗಡಿ ದಾಟಲಿದೆ ಎಂದು ಸಿನಿ ವಿಶ್ಲೇಷಕರು ಅಂದಾಜಿಸಿದ್ದಾರೆ.ಎಸ್​ಆರ್​ಕೆ ಪ್ರೀತಿಪೂರ್ವಕ ಸಂದೇಶ: ಬಹುನಿರೀಕ್ಷಿತ ಸಿನಿಮಾ ಇಂದು ಮುಂಜಾನೆ 6 ಗಂಟೆಗೆ ಬಿಡುಗಡೆ ಆಗಿದೆ. ತಮ್ಮ ಚಿತ್ರ ತೆರೆಕಂಡ ಕೆಲವೇ ಗಂಟೆಗಳ ಬಳಿಕ ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟ ಶಾರುಖ್​ ಖಾನ್​ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ X (ಹಿಂದಿನ ಟ್ವಿಟರ್​) ನಲ್ಲಿ ಹೃದಯಸ್ಪರ್ಶಿ ಬರಹ ಹಂಚಿಕೊಂಡಿದ್ದಾರೆ. ಚಿತ್ರಮಂದಿರಗಳ ಹೊರಗೆ ಮತ್ತು ಒಳಗೆ ತಮ್ಮ ಮೇಲೆ ಅಚಲ ಪ್ರೀತಿ, ಬೆಂಬಲ ತೋರಿದ ಅಭಿಮಾನಿಗಳನ್ನುದ್ದೇಶಿಸಿ ಎಸ್​ಆರ್​ಕೆ ಪ್ರೀತಿಪೂರ್ವಕ ಸಂದೇಶ ಹಂಚಿಕೊಂಡಿದ್ದಾರೆ.

ಬಿಗ್​ ಸ್ಟಾರ್ ಕಾಸ್ಟ್, ಬಿಗ್​ ಬಜೆಟ್​ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶ ಕಂಡಿದೆ. ಸೋಷಿಯಲ್​ ಮೀಡಿಯಾದಲ್ಲಿ ಜವಾನ್​ ಟ್ರೆಂಡಿಂಗ್​ನಲ್ಲಿದೆ. ಪ್ರೇಕ್ಷಕರು ಸಿನಿಮಾ ಕುರಿತು ತಮ್ಮ ಪಾಸಿಟಿವ್​ ವಿಮರ್ಶೆ ಕೊಡುತ್ತಿದ್ದಾರೆ. ಮತ್ತೊಂದೆಡೆ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಅಭಿಮಾನಿಗಳ ಉತ್ಸಾಹ ವರ್ಣಿಸಲು ಪದಗಳ ಕೊರತೆಯಾಗಿದೆ. ಜವಾನ್​ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿರುವ ಅಭಿಮಾನಿಗಳಿಗೆ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದಿದ್ದಾರೆ.

ಶಾರುಖ್​ ಖಾನ್​ ಟ್ವೀಟ್: ಬಾಲಿವುಡ್​​ ಐಕಾನ್​​ ಈ ರೀತಿಯಾಗಿ ಬೆಂಬಲಿಗರಿಗೆ ತಮ್ಮ ಕೃತಘ್ಞತೆ ವ್ಯಕ್ತಪಡಿಸಿದ್ದಾರೆ. ”ವಾವ್​, ನಾನಿದಕ್ಕೆ ಸಮಯ ತೆಗೆದುಕೊಳ್ಳಬೇಕು. ಎಲ್ಲಾ ಫ್ಯಾನ್​ ಕ್ಲಬ್​​ ಮತ್ತು ನಿಮ್ಮೆಲ್ಲರಿಗೂ ಧನ್ಯವಾದ ಹೇಳಬೇಕು. ಸಂತೋಷದಿಂದ ಥಿಯೇಟರ್​ಗಳಿಗೆ ಹೋದ ಎಲ್ಲರಿಗೂ ಧನ್ಯವಾದಗಳು. ಜವಾನ್​ನನ್ನು ಪ್ರೀತಿಸಿದ್ದಕ್ಕಾಗಿ, ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇಂದು ಥಿಯೇಟರ್​ ಹೊರಗೆ ಮತ್ತು ಒಳಗೆ ಕಂಡುಬಂದ ಅಭಿಮಾನಿಗಳ ಉತ್ಸಾಹ, ಸಂಭ್ರಮಾಚರಣೆ ನಿಜಕ್ಕೂ ಹಬ್ಬದ ವಾತಾವರಣದಂತಿತ್ತು. ಶಾರುಖ್​ ಖಾನ್​ ಟ್ವೀಟ್​ಗೂ ಮುನ್ನ, ಎಸ್​ಆರ್​ಕೆ ಫ್ಯಾನ್ಸ್​ ಪೇಜ್​ಗಳು ಸಂಭ್ರಮಾಚರಣೆಯ ವಿಡಿಯೋ ಹಂಕೊಂಡಿವೆ. ಮುಂಬೈನ ಖ್ಯಾತ ಥಿಯೇಟರ್​ ಗೈಟಿ ಗ್ಯಾಲಾಕ್ಸಿ ಥಿಯೇಟರ್​ ಬಳಿ ಮುಂಜಾನೆ 6 ಗಂಟೆ ಹೊತ್ತಿಗೆ ಪ್ರೇಕ್ಷಕರು ಥಿಯೇಟರ್​​ನತ್ತ ಮುಖ ಮಾಡುತ್ತಿದ್ದು, ಸುತ್ತಲೂ ವಿದ್ಯುತ್​ ದೀಪಾಲಂಕಾರವುಳ್ಳ ವಿಡಿಯೋ ವನ್ನು ಫ್ಯಾನ್ಸ್​ ಪೇಜ್​ ಶೇರ್ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉಳಿದಂತೆ ನಟ ಶಾರುಖ್​ ಖಾನ್​ ಬಗ್ಗೆ, ವಿ ಲವ್​ ಶಾರುಖ್​​, ಭಾರತ್​ ಕಿ ಶಾನ್​​ ಶಾರುಖ್​​ , ಬಂದಾ ಹೈ ತೋ ಜಿಂದಾ ಹೈ ಎಂಬೆಲ್ಲಾ ಕಾಮೆಂಟ್​ಗಳು ಹರಿದು ಬರುತ್ತಿದೆ.