ದಕ್ಷಿಣ ಚಿತ್ರರಂಗದ ಯಶಸ್ವಿ ನಿರ್ದೇಶಕ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದ ಜವಾನ್ ಸಿನಿಮಾವನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ.ಜವಾನ್ ಸಿನಿಮಾಗೆ ಸಿಕ್ಕ ಸಕಾರಾತ್ಮಕ ಸ್ಪಂದನೆಗೆ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಎಲ್ಲರ ಗಮನ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಕೇಂದ್ರೀಕೃತವಾಗಿದೆ. ಭಾರತೀಯ ಗಲ್ಲಾಪಟ್ಟಿಯಲ್ಲಿ 75 ಕೋಟಿ ರೂ. ಸೇರಿದಂತೆ ವಿಶ್ವಾದ್ಯಂತ ಒಟ್ಟು 100 ಕೋಟಿ ರೂ. ಗಡಿ ದಾಟಲಿದೆ ಎಂದು ಸಿನಿ ವಿಶ್ಲೇಷಕರು ಅಂದಾಜಿಸಿದ್ದಾರೆ.ಎಸ್ಆರ್ಕೆ ಪ್ರೀತಿಪೂರ್ವಕ ಸಂದೇಶ: ಬಹುನಿರೀಕ್ಷಿತ ಸಿನಿಮಾ ಇಂದು ಮುಂಜಾನೆ 6 ಗಂಟೆಗೆ ಬಿಡುಗಡೆ ಆಗಿದೆ. ತಮ್ಮ ಚಿತ್ರ ತೆರೆಕಂಡ ಕೆಲವೇ ಗಂಟೆಗಳ ಬಳಿಕ ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟ ಶಾರುಖ್ ಖಾನ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ಹೃದಯಸ್ಪರ್ಶಿ ಬರಹ ಹಂಚಿಕೊಂಡಿದ್ದಾರೆ. ಚಿತ್ರಮಂದಿರಗಳ ಹೊರಗೆ ಮತ್ತು ಒಳಗೆ ತಮ್ಮ ಮೇಲೆ ಅಚಲ ಪ್ರೀತಿ, ಬೆಂಬಲ ತೋರಿದ ಅಭಿಮಾನಿಗಳನ್ನುದ್ದೇಶಿಸಿ ಎಸ್ಆರ್ಕೆ ಪ್ರೀತಿಪೂರ್ವಕ ಸಂದೇಶ ಹಂಚಿಕೊಂಡಿದ್ದಾರೆ.
ಬಿಗ್ ಸ್ಟಾರ್ ಕಾಸ್ಟ್, ಬಿಗ್ ಬಜೆಟ್ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶ ಕಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಜವಾನ್ ಟ್ರೆಂಡಿಂಗ್ನಲ್ಲಿದೆ. ಪ್ರೇಕ್ಷಕರು ಸಿನಿಮಾ ಕುರಿತು ತಮ್ಮ ಪಾಸಿಟಿವ್ ವಿಮರ್ಶೆ ಕೊಡುತ್ತಿದ್ದಾರೆ. ಮತ್ತೊಂದೆಡೆ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಅಭಿಮಾನಿಗಳ ಉತ್ಸಾಹ ವರ್ಣಿಸಲು ಪದಗಳ ಕೊರತೆಯಾಗಿದೆ. ಜವಾನ್ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿರುವ ಅಭಿಮಾನಿಗಳಿಗೆ ಸೂಪರ್ ಸ್ಟಾರ್ ಶಾರುಖ್ ಖಾನ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದಿದ್ದಾರೆ.
ಶಾರುಖ್ ಖಾನ್ ಟ್ವೀಟ್: ಬಾಲಿವುಡ್ ಐಕಾನ್ ಈ ರೀತಿಯಾಗಿ ಬೆಂಬಲಿಗರಿಗೆ ತಮ್ಮ ಕೃತಘ್ಞತೆ ವ್ಯಕ್ತಪಡಿಸಿದ್ದಾರೆ. ”ವಾವ್, ನಾನಿದಕ್ಕೆ ಸಮಯ ತೆಗೆದುಕೊಳ್ಳಬೇಕು. ಎಲ್ಲಾ ಫ್ಯಾನ್ ಕ್ಲಬ್ ಮತ್ತು ನಿಮ್ಮೆಲ್ಲರಿಗೂ ಧನ್ಯವಾದ ಹೇಳಬೇಕು. ಸಂತೋಷದಿಂದ ಥಿಯೇಟರ್ಗಳಿಗೆ ಹೋದ ಎಲ್ಲರಿಗೂ ಧನ್ಯವಾದಗಳು. ಜವಾನ್ನನ್ನು ಪ್ರೀತಿಸಿದ್ದಕ್ಕಾಗಿ, ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇಂದು ಥಿಯೇಟರ್ ಹೊರಗೆ ಮತ್ತು ಒಳಗೆ ಕಂಡುಬಂದ ಅಭಿಮಾನಿಗಳ ಉತ್ಸಾಹ, ಸಂಭ್ರಮಾಚರಣೆ ನಿಜಕ್ಕೂ ಹಬ್ಬದ ವಾತಾವರಣದಂತಿತ್ತು. ಶಾರುಖ್ ಖಾನ್ ಟ್ವೀಟ್ಗೂ ಮುನ್ನ, ಎಸ್ಆರ್ಕೆ ಫ್ಯಾನ್ಸ್ ಪೇಜ್ಗಳು ಸಂಭ್ರಮಾಚರಣೆಯ ವಿಡಿಯೋ ಹಂಕೊಂಡಿವೆ. ಮುಂಬೈನ ಖ್ಯಾತ ಥಿಯೇಟರ್ ಗೈಟಿ ಗ್ಯಾಲಾಕ್ಸಿ ಥಿಯೇಟರ್ ಬಳಿ ಮುಂಜಾನೆ 6 ಗಂಟೆ ಹೊತ್ತಿಗೆ ಪ್ರೇಕ್ಷಕರು ಥಿಯೇಟರ್ನತ್ತ ಮುಖ ಮಾಡುತ್ತಿದ್ದು, ಸುತ್ತಲೂ ವಿದ್ಯುತ್ ದೀಪಾಲಂಕಾರವುಳ್ಳ ವಿಡಿಯೋ ವನ್ನು ಫ್ಯಾನ್ಸ್ ಪೇಜ್ ಶೇರ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉಳಿದಂತೆ ನಟ ಶಾರುಖ್ ಖಾನ್ ಬಗ್ಗೆ, ವಿ ಲವ್ ಶಾರುಖ್, ಭಾರತ್ ಕಿ ಶಾನ್ ಶಾರುಖ್ , ಬಂದಾ ಹೈ ತೋ ಜಿಂದಾ ಹೈ ಎಂಬೆಲ್ಲಾ ಕಾಮೆಂಟ್ಗಳು ಹರಿದು ಬರುತ್ತಿದೆ.