ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು;ಇದೀಗ ಮತ್ತೆ ಶುರುವಾಗಲಿದೆ ಜಾವಾ ಹವಾ

80-90ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು, ಮತ್ತೆ  ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ದಶಕಗಳ ಹಿಂದೆ ಬೈಕ್ ಪ್ರಿಯರಲ್ಲಿ ಹುಚ್ಚು ಹಿಡಿಸಿದ್ದ, ಜಾವಾ ಬೈಕುಗಳನ್ನು ಜಾವಾ ಮೋಟಾರ್ ಸೈಕಲ್ ಕಂಪನಿ ಪುನಃ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ. ಕಂಪನಿ ತನ್ನ ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಯ ಮೂರು ಆವೃತ್ತಿಗಳನ್ನು ಇತ್ತಿಚೆಗಷ್ಟೆ  ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಜಾವಾ ಕಂಪನಿಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಅದೇ ಮಾದರಿಯನ್ನು ಉಳಿಸಿಕೊಂಡು ಬಂದಿದೆ. ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

ಜಾವಾ ಹಾಗೂ ಜಾವಾ 42 ಬೈಕ್‍ಗಳು ಮಧ್ಯಪ್ರದೇಶದ ಪಿಥಮ್‍ಪುರ್ ನಲ್ಲಿರುವ ಮಹೀಂದ್ರಾ ಘಟಕದಲ್ಲಿ ತಯಾರಾಗಲಿದ್ದು, 2019ರ ಫೆಬ್ರವರಿಯಲ್ಲಿ ಬೈಕುಗಳು ಟೆಸ್ಟ್ ರೈಡ್‍ಗೆ ಸಿಗಲಿದೆ. ಫೆಬ್ರವರಿಯ ನಂತರ ಗ್ರಾಹಕರ ಕೈ ಸೇರಲಿವೆ. ಅಲ್ಲದೇ ಜಾವಾ ಪೆರಾಕ್ ಬೈಕ್ 2019ರ ಮಧ್ಯದಲ್ಲಿ ಗ್ರಾಹಕರಿಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ.

ಜಾವಾ ಬೈಕಿನ ಗುಣವೈಶಿಷ್ಟ್ಯಗಳು:

293ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 27 ಬಿಎಚ್‍ಪಿ ಜೊತೆ 28 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂಭಾಗ 280 ಎಂಎಂ ಡಿಸ್ಕ್ ಜೊತೆ ಎಬಿಎಸ್ ಬ್ರೇಕ್ ಹೊಂದಿದ್ದರೆ, ಹಿಂದುಗಡೆ 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಒಟ್ಟಾರೆ ಬೈಕಿನ ತೂಕ 170 ಕೆಜಿ ಯಷ್ಟಿದೆ. ಇದು ಬ್ಲಾಕ್, ಮರೂನ್ ಹಾಗೂ ಗ್ರೇ ಬಣ್ಣಗಳಲ್ಲಿ ಲಭ್ಯವಿರಲಿದೆ.

ನೂತನ ಜಾವಾ ಬೈಕುಗಳ ಬೆಲೆ ಎಷ್ಟು?
ನೂತನ ಬೈಕುಗಳಾದ ಜಾವಾ ಮಾದರಿಗೆ 1.64 ಲಕ್ಷ ರೂಪಾಯಿ, ಜಾವಾ 42 ಗೆ 1.55 ಲಕ್ಷ ರೂ. ಹಾಗೂ ಜಾವಾ ಪೆರಾಕ್ ಮಾದರಿಗೆ 1.89 ಲಕ್ಷ ರೂ. ಅಂದಾಜು ಬೆಲೆ ನಿಗದಿಯಾಗಿದೆ.

– ಶ್ರೇಯಸ್ ,ಚಿಕ್ಕಮಗಳೂರು

BE(Automobile)