ಟೋಕಿಯೋ: ಜಪಾನ್‌ನ ನಾರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೈಪ್, ಟೇಪ್, ಮರ ಮತ್ತು ವಿದ್ಯುತ್ ಗುಂಡಿನ ಘಟಕಗಳಿಂದ ತಯಾರಿಸಿದ ಅತ್ಯಂತ ಸುಧಾರಿತ ಕಚ್ಚಾ ಡಬಲ್-ಬ್ಯಾರೆಲ್ ಆಯುಧದಿಂದ ಅಬೆ ಮೇಲೆ ಗುಂಡುಹಾರಿಸಲಾಗಿದೆ ಎನ್ನಲಾಗಿದೆ. ಘಟನೆಯ ನಂತರ 40 ರ ಹರೆಯದ ಯಮಗಾಮಿ ಎಂಬ ಪುರುಷ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಗುಂಡೇಟು ತಗಲಿರುವ ಅಬೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಭಾರತ ಮತ್ತು ಜಪಾನಿನ ಬಾಂಧವ್ಯವನ್ನು ಹೊಸ ಉತ್ತುಂಗಕ್ಕೇರಿಸಿದ ಅಬೆ ಹತ್ಯೆ ಯತ್ನದ ಘಟನೆಯಿಂದ ಪ್ರಧಾನಿ ಮೋದಿ ಆಹತರಾಗಿದ್ದಾರೆ ಮತ್ತು ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ. ಶಿಂಜೋ ಅಬೆ ಜಪಾನಿನ ಅತ್ಯಂತ ದೀರ್ಘಕಾಲೀನ ಪ್ರಧಾನ ಮಂತ್ರಿಯಾಗಿದ್ದರು. ತಮ್ಮ ಅನಾರೋಗ್ಯದ ಕಾರಣದಿಂದ ಎರಡು ವರ್ಷಗಳ ಹಿಂದೆ ಪದವಿ ತ್ಯಜಿಸಿದ್ದರು. ಪೂರ್ವ ಪ್ರಧಾನಿಯ ಹತ್ಯೆ ಯತ್ನವು ಜಗತ್ತನ್ನೆ ತಲ್ಲಣಗೊಳಿಸಿದೆ.