ಪರ್ಯಾಯಕ್ಕೆ ಆಗಮಿಸಿದ ಜಪಾನ್ ನಿಯೋಗದಿಂದ ಕೆಮುಂಡೇಲು ಅನುದಾನಿತ ಶಾಲೆಗೆ ಭೇಟಿ

ಉಡುಪಿ: ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿರುವ ಜಪಾನ್ ದೇಶದ ರೆವ್ ಕೋಶೋ ನಿವಾನೋ ಮತ್ತು ಅವರ 7 ಸದಸ್ಯರ ನಿಯೋಗವು ಉಡುಪಿ ಜಿಲ್ಲೆಯ ಎಲ್ಲೂರು ಸಮೀಪದ ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಿದರು.

ಜಪಾನಿನ ರಿಷ್ಯೋ ಕೊಸೈ ಕಾಯ್ ಸಂಸ್ಥೆಯ ನಿಯೋಜಿತ ಮಹಾ ಅಧ್ಯಕ್ಷೆ ರೆವ್ ಕೋಶೋ ನಿವಾನೋ ಅವರು ಸೇವೆಯೇ ಪರಮ ಧರ್ಮ ಎಂಬ ತತ್ವವನ್ನು ನಂಬಿದವರು. ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸಿದ ಪುತ್ತಿಗೆ ಶ್ರೀಗಳಿಗೆ ವಂದನೆಗಳನ್ನು ಸಲ್ಲಿಸಿ, ಮಕ್ಕಳಿಗೆ ಶಿಸ್ತು ಮತ್ತು ಸೇವೆ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ ಮತ್ತು ಅಧ್ಯಾಪಕ ಚಂದ್ರಹಾಸ ಪ್ರಭು ಅವರು ಶಾಲೆಯ ವೈಶಿಷ್ಟ್ಯತೆಯನ್ನು ವಿವರಿಸಿದರು.

ಪರ್ಯಾಯ ಮಹೋತ್ಸವಕ್ಕೆ ಆಗಮಿಸಿದ ಜಪಾನ್ ದೇಶದ ನಿಯೋಗದ ಭೇಟಿಯ ಉಸ್ತುವಾರಿ ವಹಿಸಿರುವ ಅಮೇರಿಕಾದ ವಿಜ್ಞಾನಿ, ಡಾ. ಎ. ಕೇಶವರಾಜ್ ಅವರು ರೆವ್ ಕೋಶೋ ನಿವಾನೋ ಅವರನ್ನು ಪರಿಚಯಿಸಿದರು.

ವಿದ್ಯಾರ್ಥಿಗಳು ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಿ ಅತಿಥಿಗಳು ತಲೆದೂಗುವಂತೆ ಮಾಡಿದರು.