ಜನೌಷದ ಕೇಂದ್ರಗಳಲ್ಲಿ ಔಷಧಿ ಇಲ್ಲದೆ ಸಮಸ್ಯೆ: ಅಣ್ಣಪ್ಪ ಸ್ವಾಮಿ

ಉಡುಪಿ: ಕರಾವಳಿ ಭಾಗದ ವಿವಿದೆಡೆ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳು ಹೆಸರಿಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆದರೆ ಅಲ್ಲಿ ಅಗತ್ಯವಿರುವ ಯಾವುದೇ ಔಷಧಗಳು ಲಭ್ಯವಿರುವುದಿಲ್ಲ. ಇದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಸ್ವಾಮಿ ತಿಳಿಸಿದರು.
ಈ ಸಂಬಂಧ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಮಯಕ್ಕೆ ಸರಿಯಾಗಿ ಔಷಧಗಳು ಲಭ್ಯವಾಗುತ್ತಿಲ್ಲ. ಯಾವುದೇ ಒಂದು ಬಗೆಯ ಔಷಧದ ಚೀಟಿ ನೀಡಿದರೆ, ಅದಕ್ಕೆ ಬದಲಾಗಿರುವ ಔಷಧವನ್ನು ನೀಡುತ್ತಿದ್ದಾರೆ ಎಂದರು.
ಅದೇ ರೀತಿಯಲ್ಲಿ ಸಹಕಾರಿ ಸಂಘಗಳು ವಾಹನ ಸಾಲಗಾರರಿಗೆ ಹಾಗೂ ಜಾಮೀನುದಾರರಿಗೆ ದಬ್ಬಾಳಿಕೆ ಮಾಡುತ್ತಿದ್ದು, ಅವರ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹಕಾರಿ ಸಂಘಗಳ‌ ಸಹಾಯಕ ನಿಬಂಧಕರು ಹಾಗೂ ವಸೂಲಾತಿ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಈ ಬಗ್ಗೆ ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಜನೌಷಧಿ ಕೇಂದ್ರಗಳ ಅವ್ಯವಸ್ಥೆ ಮತ್ತು ಸಹಕಾರಿ ಬ್ಯಾಂಕ್‌ಗಳ ದಬ್ಬಾಳಿಕೆ ಇದೇ ರೀತಿ ಮುಂದುವರೆದರೆ ಆಗಸ್ಟ್‌ 15ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಅಖಿಲ ಭಾರತ ಕಾರ್ಮಿಕ ಸಂಘದ ಜಿಲ್ಲಾ ಪ್ರ. ಕಾರ್ಯದರ್ಶಿ ಆರೂರು ಕೃಷ್ಣ ರಾವ್‌, ಮಂಗಳೂರು ಇಎಸ್‌ಐ ಆಸ್ಪತ್ರೆ ಕುಂದುಕೊರತೆ ಸಮಿತಿ ಸದಸ್ಯ ಸುದತ್ತ ಜೈನ್‌ ಶಿರ್ತಾಡಿ, ದ.ಕ. ಜಿಲ್ಲಾಧ್ಯಕ್ಷ ಸಂತೋಷ್‌ ಕಾವೂರು ಉಪಸ್ಥಿತರಿದ್ದರು.