ಜನತೆಯ ಸಮಸ್ಯೆಗೆ ಅಧಿಕಾರಗಳ ಸಕಾರಾತ್ಮಕ ಸ್ಪಂದನೆಯಿಂದ ಜನತಾ ದರ್ಶನ ಕಾರ್ಯಕ್ರಮ ಅರ್ಥಪೂರ್ಣ: ಯಶ್‌ಪಾಲ್ ಸುವರ್ಣ

ಬ್ರಹ್ಮಾವರ: ಜನ ಸಾಮಾನ್ಯರು ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ಜನಸ್ಪಂದನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾದಲ್ಲಿ ಮಾತ್ರ ಜನತಾ ದರ್ಶನ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗುತ್ತದೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.

ಅವರು ಬುಧವಾರ ಬ್ರಹ್ಮಾವರದ ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿರುವ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಬ್ರಹ್ಮಾವರ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಇವರ ಸಹಯೋಗದೊಂದಿಗೆ ನಡೆದ ಬ್ರಹ್ಮಾವರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಂದಾಯ ಇಲಾಖೆಯಲ್ಲಿ ಹೆಚ್ಚಾಗಿ ಕಂಡುಬರುವ ಹಕ್ಕುಪತ್ರ ವಿತರಣೆಗೆ ಇರುವ ಗೊಂದಲಗಳನ್ನು ಬಗೆಹರಿಸಿ, ಶೀಘ್ರದಲ್ಲಿಯೇ ಅವುಗಳ ವಿತರಣೆಗೆ ಮುಂದಾಗಬೇಕು. ಮೆಸ್ಕಾಂ ಸೇರಿದಂತೆ ಇತರೆ ಇಲಾಖೆಯೊಂದಿಗೆ ಮುಂಬರುವ ಮಳೆಗಾಲಕ್ಕೂ ಮುಂಚೆಯೇ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದ ಅವರು, ಮಹಿಳೆಯರಿಗೆ ಗ್ಯಾರಂಟಿ ಯೋಜನೆಯಡಿ ಉಚಿತ ಬಸ್ ಸೌಲಭ್ಯ
ನೀಡಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಎಲ್ಲರಿಗೂ ದೊರಕುವಂತಾಗಬೇಕು ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಮಸ್ಯೆಗೆ ಪರಿಹಾರ ಕೋರಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಇದು ಬರೀ ಕಾರ್ಯಕ್ರಮವಾಗದೇ ಜನರಿಗೆ ಪರಿಹಾರ ಸೂಚಿಸುವಂತಹ ವೇದಿಕೆ ಆಗಬೇಕು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಚಿಂತಿಸಿ ಪರಿಹಾರ ನೀಡಬೇಕು. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಕಾರ್ಯಕ್ರಮ ಆಯೋಜಿಸಿ, ಹೋಬಳಿ ಮಟ್ಟದ ಅಧಿಕಾರಿಗಳು
ಅದರಲ್ಲಿ ಭಾಗವಹಿಸಿ, ಜನರ ಅನೇಕ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವಂತಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ದೈನಂದಿನ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬೇಕೆಂಬ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಹೆಚ್ಚಿನ ಸಮಯವನ್ನು ಮೀಸಲಿಟ್ಟು ಆ ಮೂಲಕ
ಅಧಿಕಾರಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಅರ್ಜಿಗಳು ಬಂದಲ್ಲಿ ಅವುಗಳನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಾಜು ಮೊಗವೀರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ಇಬ್ರಾಹಿಂಪುರ, ವಿವಿಧ ಜಿಲ್ಲಾ ಹಾಗೂ
ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಸ್ವಾಗತಿಸಿ, ರಾಘವ ಶೆಟ್ಟಿ ನಿರೂಪಿಸಿ, ಪ್ರಕಾಶ್ ವಂದಿಸಿದರು.

ಕಾರ್ಯಕ್ರಮದಲ್ಲಿ 85 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಕಂದಾಯ ಇಲಾಖೆಗೆ 49, ಗ್ರಾಮೀಣ ಅಭಿವೃದ್ದಿ ಇಲಾಖೆಗೆ 22, ಶಿಕ್ಷಣ ಇಲಾಖೆ 01, ಗಣಿ ಇಲಾಖೆ 01, ಸಬ್ ರಿಜಿಸ್ಟಾರ್ 02, ಭೂಮಾಪಾನ ಇಲಾಖೆಗೆ 01, ಸಿಡಿಪಿಯು 03, ಮೆಸ್ಕಾಂ 1, ಲೋಕೋಪಯೋಗಿ ಇಲಾಖೆ 02, ಸಾರಿಗೆ ಇಲಾಖೆ 01 ಹಾಗೂ ಪೋಲಿಸ್ ಇಲಾಖೆಗೆ 01 ಬಂದಿರುತ್ತದೆ.