ಉಡುಪಿ: ರಾಜ್ಯದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಿದ ಹಿನ್ನೆಲೆಯಲ್ಲಿ ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬಿಜೆಪಿಯು ಪ್ರತಿ ಜಿಲ್ಲೆಯಲ್ಲಿಯೂ ‘ಗ್ರಾಮಸೇವಕ್ ಸಮಾವೇಶ’ವನ್ನು ಆಯೋಜಿಸುತ್ತಿದೆ. ಈ ಮೂಲಕ ಪಕ್ಷದಲ್ಲಿ ಜವಾಬ್ದಾರಿ ಹೊತ್ತಿರುವ ಎಲ್ಲಾ ಕಾರ್ಯಕರ್ತರನ್ನು ಸಕ್ರಿಯ ಗೊಳಿಸುವಲ್ಲಿ ಪ್ರಯತ್ನಗಳಾಗುತ್ತಿವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಉಡುಪಿ ನಗರ ಇದರ ಆಶ್ರಯದಲ್ಲಿ ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಜನವರಿ 12ರಂದು ನಡೆಯುವ ಉಡುಪಿ ಜಿಲ್ಲಾ ಮಟ್ಟದ ಜನ ಸೇವಕ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ನಗರ ಬಿಜೆಪಿ ಉಪಾಧ್ಯಕ್ಷ ವೆಂಕಟ್ರಮಣ ಕಿದಿಯೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನಕುಮಾರ್ ಶೆಟ್ಟಿ ಸಮಾವೇಶದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರೇಷ್ಮಾ ಉದಯಕುಮಾರ್ ಶೆಟ್ಟಿ, ನಗರ ಬಿಜೆಪಿ ಉಪಾಧ್ಯಕ್ಷ ಕೃಷ್ಣಪ್ಪ ಜತ್ತನ್, ಜಿಲ್ಲಾ ವಕ್ತಾರರಾದ ಶಿವಕುಮಾರ್ ಮತ್ತು ಗಿರೀಶ್ ಅಂಚನ್, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಕೊಳ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಯಶಪಾಲ್ ಸುವರ್ಣ ಸ್ವಾಗತಿಸಿದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ನಿರೂಪಿಸಿದರು.