ಜ. 4ರಂದು ಜಿಲ್ಲಾ ಕೃಷಿಕ ಸಂಘದ ವತಿಯಿಂದ ಪ್ರತಿಭಟನೆ

ಉಡುಪಿ: ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಂಕಷ್ಟ, ಸಮಸ್ಯೆಗಳ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆಯ ವಿರುದ್ಧ ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಜ. 4ರಂದು ಬೆಳಿಗ್ಗೆ 11ಗಂಟೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರ ಕುಮ್ಕಿ ಹಕ್ಕನ್ನು ರದ್ದುಗೊಳಿಸಬಾರದು. ಬೆಳೆ ಸಮೀಕ್ಷೆಯ ವಿವರಗಳನ್ನು ರೈತರಿಗೂ ನೀಡಬೇಕು. ಬೆಳೆ ಪರಿಹಾರದ ನಿಯಮಗಳನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳ ಮುಕ್ತ ಆಮದು ನೀತಿ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಬೇಕು. ಕೃಷಿ ಇಲಾಖೆಯ ಸೌಲಭ್ಯಗಳ ಮಾಹಿತಿಯನ್ನು ದಿನ ಪತ್ರಿಕೆ ಪ್ರಸಾರ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಕೃಷಿ ಪಿಂಚಣಿ ಯೋಜನೆಯನ್ನು 60 ವರ್ಷ ಮೇಲ್ಪಟ್ಟ ಕೃಷಿಕರಿಗೂ‌ ವಿಸ್ತರಣೆ ಮಾಡಬೇಕು ಈ ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಆಗ್ರಹ ಪಡಿಸಲಾಗುವುದು ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌, ಉಪಾಧ್ಯಕ್ಷ ದಿನೇಶ್‌ ಶೆಟ್ಟಿ ಹೆರ್ಗ, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಗೋಷ್ಠಿಯಲ್ಲಿ
ಇದ್ದರು.