ಜ.೧೧ಕ್ಕೆ ‘ದೇಯಿ ಬೈದಿತಿ – ಗೆಜ್ಜೆ ಗಿರಿ ನಂದನೊಡು’ ಚಿತ್ರ ತೆರಿಗೆ

ಉಡುಪಿ: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದಿತಿ ಅವರ ಜೀವನದ ಕಥೆ ಆದರಿತ ‘ದೇಯಿ ಬೈದೆತಿಗೆಜ್ಜೆ ಗಿರಿ ನಂದನೊಡು’ ಚಿತ್ರ ಜನವರಿ ೧೧ಕ್ಕೆ ತೆರೆಗೆ ಬರಲಿದೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿ ಯು ಪ್ರಮಾಣಪತ್ರವನ್ನು ನೀಡಿದ್ದಾರೆ.

ದೇಯಿ ಪಟ್ಟ ಶ್ರಮದ ಚಿತ್ರ

ಐನೂರು ವರ್ಷಗಳ ಹಿಂದೆ ಓರ್ವ ಮಹಿಳೆ ತನ್ನ ನಾಡಿಗೋಸ್ಕರ ಯಾವ ರೀತಿ ತನ್ನ ಜೀವನವನ್ನೇ ಬಲಿದಾನ ಮಾಡುತ್ತಾರೆ ಎನ್ನುವುದೇ ಚಿತ್ರದ ಥೀಮ. ಕೋಟಿ-ಚೆನ್ನಯರ ಪಾಡ್ದನದಲ್ಲಿ ದೇಯಿ ಬೈದೆತಿಯ ಒಂದು ಮುಖ ಮಾತ್ರ ಬಿಂಬಿಸಲಾಗಿದೆ. ಆಕೆ ತನ್ನ ಜೀವನದಲ್ಲಿ ಪಟ್ಟ ಶ್ರಮವೇನು ಎಂದು ಎಲ್ಲೂ ತೋರಿಸಿಲ್ಲ. ಅದನ್ನು ಜನರಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪಾಡ್ದನದಲ್ಲಿ ಮರೆಮಾಚಲಾದ ವಿಷಯ, ತುಳುನಾಡ ಸಂಸ್ಕೃತಿ ಯನ್ನು ಬೆಳ್ಳಿಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ ನಿರ್ದೇಶಕರು.

ಬಣ್ಣದ ಲೋಕದಲ್ಲಿ ಸುಮಾರು ೨೫ ವರ್ಷಗಳ ಅನುಭವ ಹೊಂದಿರುವ ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಿತ್ರ ಇದು. ನನ್ನ ತಾಯಿ ಸಂಕ್ರಿ ಅಮೀನ್, ಮಾವ ಪಾತ್ರಿ ರಾಯಪ್ಪ ಪೂಜಾರಿ ಅವರು ಪಾಡ್ದನ ಹೇಳುತ್ತಿದ್ದರು. ಅವರ ಪಾಡ್ದನ ಕೇಳುತ್ತಾ ನಾನು ಬೆಳೆದಿದ್ದೇನೆ. ಬಾಲ್ಯದಲ್ಲಿ ನನಗೆ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಆಸಕ್ತಿ ಇದ್ದುದರಿಂದ ಆ ಬಗ್ಗೆ ಅಧ್ಯಯನ ಮಾಡಿದೆ. ಹತ್ತು ವರ್ಷಗಳ ಹಿಂದೆ ‘ವಿದ್ಯಾಕ್ರಾಂತಿಯ ವೀರರು ಕೋಟಿ ಚೆನ್ನಯರು’ ಎಂಬ ಕೃತಿ ಬರೆದಿದೆ, ಈ ನಡುವೆ ಸಾಮಾನ್ಯ ಮಹಿಳೆಯೂ ಅಸಾಮಾನ್ಯ ಶಕ್ತಿಯನ್ನು ಹೊಂದಿದ್ದ ದೇಯಿ ಬೈದಿತಿ ಕುರಿತು ಚಿತ್ರವನ್ನು ತಯಾರಿಸುವ ಬಯಕೆ ಹುಟ್ಟಿಕೊಂಡಿತು ಎನ್ನುತ್ತಾರೆ ಅವರು.

ಸೀತಾ ಕೋಟೆ, ಅಮಿತ್ ರಾವ್, ಚೇತನ್ ರೈ ಮಾಣಿ, ಶಿವಧ್ವಜ್, ಸೂರ್ಯೋದಯ, ರವಿ ಭಟ್, ಪೂರ್ಣಿಮಾ, ಪವಿತ್ರ ಕಟಪಾಡಿ ಮತ್ತಿತರರು ತಾರಾಗಣದಲ್ಲಿದ್ದಾರೆ. ಲಕ್ಷ್ಮಣ್ ಕೆ. ಅಮೀನ್, ಇನ್ ಅರ್ಪಿಸುವ ಸಂಕ್ರಿ ಮೋಷನ್ ಪಿಚ್ಚರ್ಸ್ ನ ಬ್ಯಾನರ್‌ನಲ್ಲಿ ತಯಾರಾದ ಚಿತ್ರ ಇದಾಗಿದ್ದು, ಚಿತ್ರದ ನಿರ್ಮಾಣ, ಸಾಹಿತ್ಯ, ಚಿತ್ರಕಥೆ, ನಿರ್ದೇಶನ, ಸಂಭಾಷಣೆಯನ್ನು ಸೂರ್ಯೋದಯ ಅವರೇ ನಿರ್ವಹಿಸುತ್ತಿದ್ದಾರೆ. 

ಉಮೇಶ್ ಪೂಜಾರಿ ಬೆಳ್ತಂಗಡಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಭಾಸ್ಕರ್ ರಾವ್ ಸಂಗೀತ ನೀಡಿದ್ದು, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ, ಹರೀಶ್ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಲಾ ನಿರ್ದೇಶಕರಾಗಿ ರವಿ ಪೂಜಾರಿ ಹಿರಿಯಡ್ಕ, ದಿನೇಶ್ ಸುವರ್ಣ ರಾಯಿ ಸಹಕರಿಸಿದ್ದಾರೆ.