ಉಡುಪಿ: ಕಳೆದ ಎರಡೂವರೆ ವರ್ಷಗಳಿಂದ ನಾಟಕ, ವಿವಿಧ ರಂಗ ಚಟುವಟಿಕೆಗಳ ಮೂಲಕ ಮೈಸೂರಿನಲ್ಲಿ ಗುರುತಿಸಿಕೊಂಡಿರುವ ‘ನಿರ್ದಿಗಂತ’ ಇದೀಗ ನಿರಂತರ ರಂಗ ಚಟುವಟಿಕೆಗಳು ನಡೆಯುತ್ತಿರುವ ಉಡುಪಿಯ ಮೂಲಕ ಕರಾವಳಿಗೂ ಕಾಲಿರಿಸಿದ್ದು, ಜ.18ರಂದು ‘ಕರಾವಳಿಯ ನಿರ್ದಿಗಂತ’ ಉದ್ಘಾಟನೆಗೊಳ್ಳಲಿದೆ ಎಂದು ನಿರ್ದಿಗಂತದ ಸ್ಥಾಪಕರಲ್ಲೊಬ್ಬರಾದ ರಂಗಕರ್ಮಿ ಹಾಗೂ ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ನಿರ್ದಿಗಂತದ ಈ ಎಲ್ಲಾ ಕಾರ್ಯಕ್ರಮಗಳು ಜ.18ರಿಂದ 21ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ. ಶ್ರೀರಂಗಪಟ್ಟಣದಲ್ಲಿ ಪ್ರಾರಂಭಗೊಂಡ ನಿರ್ದಿಗಂತ ಇದೀಗ ಹೊಸದೊಂದು ಬಾಂಧವ್ಯವನ್ನು ಅರಸುತ್ತಾ ಕರಾವಳಿಗೆ ಬಂದಿದೆ. ಇಲ್ಲಿ ನಾಟಕಗಳನ್ನು ನೋಡುತ್ತಾ, ಹರಟುತ್ತಾ, ಅನುಭವದ ಬುತ್ತಿಗಳನ್ನು ಹಂಚಿಕೊಳ್ಳೋಣ ಎಂದರು.
ಮೊದಲ ದಿನ ಜ.18ರಂದು ಮಕ್ಕಳ ಮೂರು ನಾಟಕಗಳು, ಶೈಕ್ಷಣಿಕ ರಂಗಕಮ್ಮಟ ಹಾಗೂ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಗ್ಗೆ 10:30ರಿಂದ 11:45ರವರೆಗೆ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ‘ಮೃಗ ಮತ್ತು ಸುಂದರಿ’ ನಾಟಕ ಬಿಂದು ರಕ್ಷಿದಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಮಧ್ಯಾಹ್ನ 12:30ರಿಂದ 1:00ರವರೆಗೆ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಮಕ್ಕಳಿಂದ ವಿಜ್ಞಾನ ನಾಟಕ ‘ಕ್ಯೂರಿಯಸ್’ ನಾಟಕ ಪ್ರದರ್ಶನ ಗೊಳ್ಳಲಿದೆ. ಇತ್ತೀಚೆಗೆ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದ ಈ ನಾಟಕವನ್ನು ವರದರಾಜ್ ಬಿರ್ತಿ ರಚಿಸಿದ್ದು, ರೋಹಿತ್ ಎಸ್.ಬೈಕಾಡಿ ನಿರ್ದೇಶಿಸಿದ್ದಾರೆ.
2:30ರಿಂದ 4:30ರವರೆಗೆ ಶೈಕ್ಷಣಿಕ ರಂಗ ಕಮ್ಮಟ ನಡೆಯಲಿದ್ದು, ಹಲವು ವರ್ಷಗಳಿಂದ ಶಿಕ್ಷಣದೊಂದಿಗೆ ರಂಗಭೂಮಿಯಲ್ಲೂ ಸಕ್ರಿಯರಾಗಿರುವ ಕರಾವಳಿಯ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು, ಹೊಸ ಶಿಕ್ಷಕರಿಗೆ ಅದನ್ನು ದಾಟಿಸುವ ಪ್ರಯತ್ನ ನಡೆಸಲಿದೆ ಎಂದರು.
ಈ ಕಮ್ಮಟದಲ್ಲಿ ಖ್ಯಾತ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ಉಡುಪಿ ಡಯಟ್ನ ಉಪನ್ಯಾಸಕ ಡಾ.ಕೆ. ಕಿಶೋರ್ ಕುಮಾರ್ ಶೆಟ್ಟಿ, ಮಣಿಪಾಲ ಎಂಜೈಸಿಯ ಉಪಪ್ರಾಂಶುಪಾಲ ನಾಗೇಂದ್ರ ಪೈ, ಕೊಕ್ಕರ್ಣೆ ಶಾಲೆಯ ಶಿಕ್ಷಕ ವರದರಾಜ್ ಬಿರ್ತಿ, ಶಿಕ್ಷಕರಾಗಿರುವ ಬೈಂದೂರಿನ ಸುರಭಿ ಸಂಸ್ಥೆಯ ಸುಧಾಕರ ಪಿ.ಬೈಂದೂರು ಹಾಗೂ ರಂಗ ನಿರ್ದೇಶಕ ಅರುಣಲಾಲ್ ಭಾಗವಹಿಸಲಿದ್ದಾರೆ ಎಂದರು.
ಜ.18ರಂದು ಸಂಜೆ 6ಗಂಟೆಗೆ ಕರಾವಳಿಯ ನಿರ್ದಿಗಂತವನ್ನು ಸಾಹಿತಿ ಹಾಗೂ ಚಿಂತಕ ಫಕೀರ್ ಮುಹಮ್ಮದ್ ಕಟಪಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಈ ವೇಳೆ ಪ್ರಕಾಶ್ ರಾಜ್ ಅವರು ಉಪಸ್ಥಿತರಿರುವರು. ಬಳಿಕ ರೋಹಿತ್ ಎಸ್.ಬೈಕಾಡಿ ಇವರ ನಿರ್ದೇಶನದಲ್ಲಿ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಮಕ್ಕಳ ನಾಟಕ ‘ಕುಣಿ ಕುಣಿ ನವಿಲೇ’ ಪ್ರದರ್ಶನಗೊಳ್ಳಲಿದೆ.
ಜ.19ರ ಸೋಮವಾರ ಸಂಜೆ 6:30ಕ್ಕೆ ಮಣಿಪಾಲದ ಸಂಗಮ ಕಲಾವಿದೆರ್ ತಂಡದಿಂದ ಸಾಹಿತಿಗಳಾದ ಬೀಚಿ ಹಾಗೂ ಶ್ರೀನಿವಾಸ ವೈದ್ಯ ಇವರ ಲೇಖನಗಳನ್ನಾಧರಿಸಿದ ನಾಟಕ ‘ದೇವರ ಆತ್ಮಹತ್ಯೆ’ ನಾಟಕ ರಮೇಶ್ ಕೆ.ಬೆಣಕಲ್ರ ರಂಗರೂಪ ಹಾಗೂ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಮರುದಿನ ಜ.20 ಮಂಗಳವಾರ ಸಂಜೆ 6:30ಕ್ಕೆ ನಿರ್ದಿಗಂತ ತಂಡದಿಂದ ಲೋಹಿಯ ಲೇಖನಾಧಾರಿತ ನಾಟಕ ‘ರಾಮ, ಕೃಷ್ಣ, ಶಿವ’ ಗಣೇಶ ಮಂದಾರ್ತಿ ಇವರ ರಂಗರೂಪ, ಸಂಗೀತ ಹಾಗೂ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ.
ಕೊನೆಯ ದಿನವಾದ ಜ.21ರಂದು ಸಂಜೆ 6:00ರಿಂದ ಪ್ರಕಾಶ್ ರಾಜ್ ಅವರ ಉಪಸ್ಥಿತಿಯಲ್ಲಿ ನಿರ್ದಿಗಂತ ತಂಡದಿಂದ ‘ಸಮತೆಯ ಹಾಡು’ ಹಾಗೂ 7:15ರಿಂದ 9:15ರವರೆಗೆ ದಾರಿಯೋ ಪೋ ಅವರ ‘ಕಾಂಟ್ ಪೇ ವೋಂಟ್ ಪೇ’ ಆಧಾರಿತ ನಾಟಕ ‘ಕೊಡಲ್ಲ ಅಂದ್ರ ಕೊಡಲ್ಲ’ ಪ್ರದರ್ಶನ ಗೊಳ್ಳಲಿದೆ. ಈ ನಾಟಕದ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನ ಶಕೀಲ್ ಅಹ್ಮದ್ ಅವರದ್ದಾಗಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜು ಮಣಿಪಾಲ, ಗಣೇಶ ಮಂದಾರ್ತಿ, ಶಕೀಲ್ ಅಹಮದ್ ಹಾಗೂ ಇತರರು ಉಪಸ್ಥಿತರಿದ್ದರು.
















