ಹೆಣ್ಣೆಂದರೆ ಬರೀ ಹೆಣ್ಣಲ್ಲ ಬಾಳ ಬೆಳಗೋ ಕಣ್ಣು: ಜಹಫರ್ ಸಾಧಿಕ್ ಬರೆದ ಓದಲೇಬೇಕಾದ ಬರಹ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತೀ ಗೆ ಅವಳದೇ ಆದ ಗೌರವ ಸ್ಥಾನಮಾನಗಳಿವೆ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೆಣ್ಣು ಒಂದು ಗಂಡಿನ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ಮಹತ್ವಪೂರ್ಣ ಕಾರ್ಯವನ್ನು ನಿರ್ವಹಿಸುತ್ತಾಳೆ. ಮಹಿಳೆ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಪ್ರತಿನಿತ್ಯ ಮನೆಯ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ “ಹೌಸ್ ವೈಫ್” ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾಳೆ. ಪ್ರತಿನಿತ್ಯ ತನ್ನ ಗಂಡನಿಗೆ ಎಲ್ಲವನ್ನೂ ತಯಾರಿಸಿ ಕೊಡುತ್ತಾಳೆ. ಸಮಯಕ್ಕೆ ಸರಿಯಾಗಿ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾಳೆ. ಯಾವುದೇ ಬೇಧವನ್ನು ತೋರದೆ ತನ್ನ ಅತ್ತೆ ಮಾವನ ಸೇವೆಗೆಯ್ಯುತ್ತಾಳೆ. ಆಕೆ ಪಡುತ್ತಿರುವ ಕಷ್ಟ ಯಾರಿಗೂ ಕಾಣಿಸುವುದಿಲ್ಲ. ಇದಕ್ಕೆಲ್ಲ ಪ್ರತಿಯಾಗಿ ಆಕೆಗೆ ಎರಡು ಬೈಗುಳವೇ ಸಿಗುತ್ತದೆ ಹೊರತು ಹೊಗಳಿಕೆಯ ಮಾತು ಸಿಗುವುದಿಲ್ಲ. ತನ್ನ ಎಲ್ಲಾ ನೋವು ಸಂಕಷ್ಟಗಳನ್ನು ಮನಸ್ಸಿನಲ್ಲಿಯೇ ಅದುಮಿಕೊಂಡು ಎಲ್ಲರಲ್ಲೂ ಮಂದಹಾಸದಿಂದ ಕಾಲ ಕಳೆಯುತ್ತಾಳೆ.

ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಎನ್ನುವುದು ಮರೀಚಿಕೆಯಾಗಿ ಹೋಗಿದೆ. ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಲೈಂಗಿಕ ಕಿರುಕುಳಕ್ಕೊಳಗಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಹಿಳೆಯರ ಮೇಲಾಗುತ್ತಿರುವ ಅಪರಾಧದ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.

ಯಾವಾಗ ಒಬ್ಬಾಕೆ ಮಹಿಳೆ ಮಧ್ಯರಾತ್ರಿ ಒಬ್ಬಂಟಿಯಾಗಿ ಓಡಾಡುತ್ತಾಳೋ ಅಂದು ನಮ್ಮ ದೇಶ ರಾಮ ರಾಜ್ಯವಾಗುತ್ತದೆ ಎಂದು ಗಾಂಧೀಜಿಯವರು ಕಂಡ ಕನಸು ಕೇವಲ ಕನಸಾಗಿಯೇ ಉಳಿದಿದೆ.

ಇತ್ತೀಚೆಗೆ ತೆಲಂಗಾಣದ ಹನುಮಕೊಂಡದಲ್ಲಿ 9 ತಿಂಗಳ ಹಸುಗೂಸಿನ ಮೇಲೆ ನಡೆದ ಅತ್ಯಾಚಾರ ಇಡೀ ಮಾನವ ಕುಲವೇ ಅಸಹ್ಯ ಪಡುವಂತಾಗಿದೆ. ಇದೊಂದು ಹೇಯ ಕೃತ್ಯ. ಇಂತಹ ಕೆಲವು ವಿಕೃತಕಾಮಿಗಳು ತನ್ನ ಕಾಮದಾಸೆಯನ್ನು ಪೂರೈಸಲು ಸಣ್ಣ ಮಗುವೆಂದೂ ಲೆಕ್ಕಿಸದೇ ಅತ್ಯಾಚಾರವೆಸಗುತ್ತಾರೆ. ಅತ್ಯಾಚಾರಿಗಳಿಗೆ ಶೀಘ್ರವೇ ಗಲ್ಲು ಶಿಕ್ಷೆ ನೀಡಿದರೆ ಮಾತ್ರ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಬಹುದೆಂದು ನನ್ನ ಅನಿಸಿಕೆ.

ಕೆಲವೊಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಪ್ರತೀ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತದೆ ಎಂದು ತಿಳಿದು ಬಂದಿದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದಿಂದ ಭಾರತ ಇತರ ದೇಶಗಳೆದುರು ತಲೆ ತಗ್ಗಿಸುವಂತಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಹೆಚ್ಚಾಗಿ, ಪ್ರಕರಣಗಳು ಕಡಿಮೆಯಾದಲ್ಲಿ ಮಾತ್ರ ಭಾರತ ಒಂದು ಸದೃಢ ದೇಶವಾಗುತ್ತದೆ.

ಜಹಫರ್ ಸಾಧಿಕ್ ಕಟ್ಟದಪಡ್ಪು
ತೃತೀಯ ಬಿ.ಕಾಂ
ಎಲ್. ಸಿ. ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು