ಮಂಗಳೂರು: ಕಡಲ ತಡಿ ಮಂಗಳೂರಿನ ಪ್ರಸಿದ್ಧ ಪಿಲಿಕುಲ ನಿಸರ್ಗಧಾಮದಲ್ಲಿ ನಿಸರ್ಗಧಾಮ ಮತ್ತು ತೋಟಗಾರಿಕಾ ಇಲಾಖೆಯ ವತಿಯಿಂದ ಎರಡು ದಿನಗಳ ಹಣ್ಣುಗಳ ಉತ್ಸವ ಮತ್ತು ಹಸಲು ಮೇಳದಲ್ಲಿ ನಡೆಯುತ್ತಿರುವ ಹಲಸಿನ ಹಬ್ಬ ಹಲಸಿನ ಹಣ್ಣು ಪ್ರೀಯರ ಹಬ್ಬವಾಗಿತ್ತು.
ಎರಡು ದಿನಗಳಲ್ಲಿ ಸಾವಿರಾರು ಮಂದಿ ಈ ಹಲಸಿನ ಹಬ್ಬಕ್ಕೆ ಸಾಕ್ಷಿಯಾದರು. ಹಲಸಿನ ವಿವಿಧ ಖಾದ್ಯಗಳಾದ ಹಲಸಿನ ಪಾಯಸ, ಕಬಾಬ್, ಮುಳ್ಳ, ಚಟ್ಟಂಬಡೆ, ಮಾಂಬಳ, ಹಪ್ಪಳ, ಸಂಡಿಗೆ, ಬಿಸಿ ಬಿಸಿಯಾಗಿ ಅಲ್ಲೇ ತಟ್ಟಿ ಕಾಯಿಸಿಕೊಡುವ ಹಲಸಿನ ಹೋಳಿಗೆ.. ಹೀಗೆ ಬಾಯಿ ಚಪ್ಪರಿಸುವಂತಹ ವೈವಿಧ್ಯಮಯ ಹಲಸಿನ ಖಾದ್ಯಗಳು ಅಲ್ಲಿತ್ತು.
ತರಹೇವಾರಿ ಹಣ್ಣುಗಳಿಂದ ತಯಾರಿಸಿದ ವಿಶ್ವಕಪ್‌ನ ಕಲಾಕೃತಿ ಸ್ವಾಗತಿಸುತ್ತಿದ್ದಂತೆ, ಸುಮಾರು 80 ಮಳಿಗೆಗಳು ತೆರೆದುಕೊಳ್ಳುತ್ತಿತ್ತು. ಪ್ರತಿಯೊಂದು ಮಳಿಗೆಗಳಲ್ಲೂ ಭಿನ್ನವಾದ ವಸ್ತುಗಳು. ಹಲಸಿನ ಖಾದ್ಯಗಳು ಮಾತ್ರವಲ್ಲದೆ, ಕುರುಕಲು ತಿನಿಸು, ವಸ್ತ್ರ, ಊರಿನ ಪರ ಊರಿನ ಹಣ್ಣುಗಳು ಜತೆಗೆ ಗಿಡಗಳೂ ಇಲ್ಲಿ ಮಾರಾಟಕ್ಕಿತ್ತು.
ಜತೆಗೆ ವಿವಿಧ ತಳಿಯ ಹಣ್ಣಿನ ಗಿಡಗಳು, ಮಳೆಗೆ ಬೆಚ್ಚಗೆ ಒಳಗೆ ಕುಳಿತು ತಿನ್ನಲು ಮನೆಯಲ್ಲೇ ತಯಾರಿಸಿದ ಕುರುಕಲು ತಿನಿಸುಗಳು ಗ್ರಾಹಕರನ್ನು ಸೆಳೆಯುತ್ತಿತ್ತು.
ಹಳೆಯ ಸಾಂಪ್ರದಾಯಿಕ ತಿನಿಸು
ಹಲಸಿನ ಬೀಜದ ಚಟ್ಟಂಬಡೆ, ಉಪ್ಪಿನ ಸೊಳೆ, ಬೇಯಿಸಿದ ಹಲಸಿನ ಬೀಜ, ಐಸ್‌ಕ್ರೀಂ, ಹಲಸಿನ ಪೋಡಿ, ಉಪ್ಪಿನಕಾಯಿ, ಹಲಸಿನ ಗಟ್ಟಿ, ಹಲಸಿನ ಬೀಜದ ಹಪ್ಪಳ, ಉಪ್ಪಿನ ಸೊಳೆಯಿಂದ ತಯಾರಿಸಿದ ತಿನಿಸುಗಳು, ಸಾಂತನಿ, ಹಲಸಿನ ದೋಸೆ, ಹೋಳಿಗೆ ಹೀಗೆ ಹಲಸಿನಿಂದಲೇ, ಮಳಿಗೆಗಳಲ್ಲೇ ಬಿಸಿಯಾಗಿ ರುಚಿಯಾಗಿ ತಯಾರಿಸಿ ಕೊಡುತ್ತಿದ್ದ ಹಲಸಿನ ಸಾಂಪ್ರದಾಯಿಕ ಖಾದ್ಯಗಳಿಗೆ ಜನರ ನಾಲಗೆ ಮನಸೋತಿದ್ದವು.
ಜತೆಗೆ ಇರೊಳು, ನೇರಳೆ ಕಾಡು ಮಾವಿನಹಣ್ಣು, ಕಬ್ಬಿನಿಂದ ತಯಾರಿಸಿದ ಐಸ್‌ಕ್ರೀಂ ಮತ್ತು ಕ್ಯಾಂಡಿ. ರಂಬುಟಾನ್, ಗ್ಯಾಕ್‌ಫ್ರುಟ್, ಲಕ್ಷ್ಮಣಫಲ, ವೆಲ್ವೆಟ್ ಆ್ಯಪಲ್, ಮ್ಯಾಂಗೋಸ್ಟೈನ್, ರಾಮನಗರ ಕನಕಪುರದಿಂದ ಬಂದ ಬಗೆ ಬಗೆಯ ಮಾವು. ಔಷಧೀಯ ಸಸ್ಯಗಳು, ಖಾದಿ ಬಟ್ಟೆಗಳು, ತರಕಾರಿ ಬೀಜಗಳು, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಬಂಗುಡೆ, ಕ್ಯಾಟ್‌ಫಿಶ್, ಬೂತಾಯಿ, ಕೊಡ್ಡೆಯಿ, ಬೊಲ್ಲೆಂಜಿಲ್ ಮೀನುಗಳ ಪ್ರದರ್ಶನ ಮತ್ತು ಮಾರಾಟ ಇತ್ತು. ಮಂಕಳಲೆ ಚಂದ್ರ ಹಲಸು, ಮಲ್ಲಿಕಾ ಮಾವು, ಆಮ್ರಪಾಲಿ, ಅಪ್ಪೆಮಿಡಿ ತಳಿಗಳ ಗಿಡಗಳು. ಅದರೊಂದಿಗೆ ಜಂಬೂ ನೇರಳೆ, ಸ್ಟಾರ್‌ಫ್ರುಟ್, ಸಾಸಿರ ಸರ್ವಋತು ಲಿಂಬೆ, ಮೂಸಂಬಿ, ಕೆಂಪು ಚಕ್ಕೋತ, ಕೊಡಗಿನ ಕಿತ್ತಳೆ, ರಂಬುಟನ್, ವೆಲ್ವೆಟ್ ಆ್ಯಪಲ್ ವಿವಿಧ ಬಗೆಯ ಗಿಡಗಳು ಕೃಷಿಕರನ್ನು ಆಕರ್ಷಿಸಿದವು.
ಹೀಗಾಗಿ ಹಲಸಿನ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಗ್ರಾಹಕರು ಹಲಸಿನ ಜತೆಗೆ ಇತರ ಹಣ್ಣುಗಳನ್ನು ಖರೀದಿ ಮಾಡಿ ಹಲಸಿನ ಹಬ್ಬದಲ್ಲಿ ಪಾಲ್ಗೊಂಡು ಸಂತಸಪಟ್ಟರು.