ಮಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಭಿನ್ನಮತ ಸ್ಫೋಟಗೊಂಡಿದೆ. ಹೀಗಾಗಿ ಬಿಜೆಪಿ ಸರ್ಕಾರ ಆರು ತಿಂಗಳು ಸಹ ಇರಲ್ಲ ಎಂದು ಸ್ವತಃ ಬಿಜೆಪಿ ಹೈಕಮಾಂಡೇ ಸೂಚನೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತ ಸಿ.ಟಿ. ರವಿಯಿಂದ ಪ್ರಾರಂಭವಾಗಿದೆ. ಇದು ಹೊಸ ದಿಕ್ಕೊಂದನ್ನು ಪಡೆಯಲಿದೆ. ಇಂದಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಬಿಜೆಪಿ ಸರ್ಕಾರ ಹೆಚ್ಚು ಕಾಲ ಇರಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಸಚಿವರ ಹೆಸರು ಘೋಷಣೆ ಆಗಿವೆ. ಚರಿತ್ರೆಯಲ್ಲೇ ಮೊದಲ ಮೂರು ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ. ಸಚಿವರ ಆಯ್ಕೆಗೆ ದೆಹಲಿಯಿಂದ ಆದೇಶ ಬಂದ್ರೆ, ಖಾತೆಗೆ ಯಾರಾಗಬೇಕೆಂದು ನಾಗಪುರದಿಂದ ಆದೇಶ ಬಂತು. ದೆಹಲಿ ಮತ್ತು ನಾಗಪುರ ಹೋರಾಟದಿಂದ ಹೈಕಮಾಂಡ್ಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದರು.
ಇಂದಿನ ಈ ಸರ್ಕಾರ 2008 ರಿಂದ 2013ರ ಅವಧಿಯಲ್ಲಿದ್ದ ಸರ್ಕಾರದಂತಿದೆ ಎಂಬುದನ್ನು ಪ್ರಾರಂಭದಲ್ಲೇ ತೋರಿಸಿಕೊಟ್ಟಿದೆ. ಶಾಸಕರಾದ ರೇಣುಕಾಚಾರ್ಯ, ಅಂಗಾರ ಮತ್ತು ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್ ಅತೃಪ್ತರಾಗಿದ್ದಾರೆ. ಸಿ.ಟಿ.ರವಿ ಈಗಾಗಲೇ ಕಾರನ್ನು ಹಿಂದಕ್ಕೆ ಕಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಸಿ.ಟಿ. ರವಿಯವರನ್ನು ಬೆಂಬಲಿಸಿ ಎಂದು ಐವನ್ ಡಿಸೋಜಾ ಸವಾಲು ಹಾಕಿದರು.
ಯಡಿಯೂರಪ್ಪ ಆ್ಯಂಡ್ ಸನ್ಸ್ ಎಲ್ಲಾ ರೀತಿಯ ವರ್ಗಾವಣೆಯಲ್ಲಿ ಭಾಗವಹಿಸಿದ್ದಾರೆ. ಇದು ಜನಪರ ಸರ್ಕಾರ ಅಲ್ಲ. ಜನ ವಿರೋಧಿ ಸರ್ಕಾರ ಆಗುತ್ತದೆ ಎಂದು ಒಂದು ತಿಂಗಳ ಅವಧಿಯಲ್ಲೇ ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈ ಸರ್ಕಾರ ಜನಪರ ಆಗಿದ್ದರೆ ರಾಜ್ಯದಲ್ಲಿ ಭೀಕರ ನೆರೆ ಬಂದು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಅದಕ್ಕೆ ಏನಾದರೂ ಕೆಲಸ ಮಾಡಬೇಕಿತ್ತು. 26 ಸಂಸದರು, 5 ಜನ ಸಚಿವರಿದ್ದು, ಇಂದಿನವರೆಗೆ 5 ಪೈಸೆ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.