ನದಿಯನ್ನೇ ನುಂಗಲು ಹೊರಟಿದ್ದಾರೆ ನಾಲ್ಕೂರು ಐತನಡ್ಕ‌ದ ಭಟ್ಟರು..!  ನೂರಾರು ಲೋಡ್ ಮಣ್ಣು ಹಾಕಿ ಭೂಕಬಳಿಕೆ

ಉಡುಪಿ Xpress ಸ್ಪೆಷಲ್ ರಿಪೋರ್ಟ್:
ಬೆಳ್ತಂಗಡಿ: ಒಂದು ಕಡೆ ಕರಾವಳಿಯ ನದಿಗಳು ಬತ್ತಿ‌ ಹೋಗುತ್ತಿವೆ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಗಳು ಸದ್ಯ ಒಣಗಿ ಮೈದಾನದಂತಾಗಿವೆ. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಬಂದಷ್ಟು ಬರಲಿ‌ ಎನ್ನುವ ದುರಾಸೆಗೆ ಕೈ ಹಾಕುತ್ತಿದ್ದಾರೆ. ನದಿಯ ದಡಕ್ಕೆ ನೂರಾರು ಲೋಡ್ ಮಣ್ಣು ಹಾಕಿ ಘನಘೋರ ದೌರ್ಜನ್ಯ ಎಸಗುತ್ತಿದ್ದಾರೆ.
ಪ್ರಕೃತಿಯ ಮೇಲೆ ಯಾವರೀತಿ ಇಂತಹ ದೌರ್ಜನ್ಯ ಎಸಗುತ್ತಾರೆ ಎನ್ನುವುದಕ್ಕೆ ಉದಾಹರಣೆ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಐತನಡ್ಕದ ಭಟ್ಟರೊಬ್ಬರು.
ಫಲ್ಗುಣಿ ನದಿಗೆ ತಾಗಿಕೊಂಡಿರುವಂತೆ ಕಳೆದ ಕೆಲವು ವರ್ಷಗಳ ಹಿಂದೆ ಜಾಗ‌ ಖರೀದಿಸಿದ ಈ ಭಟ್ಟರಿಗೆ ತನ್ನ ಜಾಗವನ್ನು ಮತ್ತಷ್ಟು‌ ವಿಸ್ತರಿಸಬೇಕೆನ್ನುವ ದುರಾಸೆ. ಇದರಿಂದಾಗಿ ಬಂದ ಕೆಲವೇ ವರ್ಷದಲ್ಲಿ ಫಲ್ಗುಣಿ ನದಿಯ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿದ್ದಾರೆ. ನದಿಯ ದಡಕ್ಕೆ ಮಣ್ಣು ಹಾಕುವ ಮೂಲಕ‌ ಪ್ರತೀ ವರ್ಷ ನದಿಯ ಸ್ವಲ್ಪ ಸ್ವಲ್ಪ ಜಾಗವನ್ನು ಕಬಳಿಕೆ ಮಾಡುತ್ತಿದ್ದಾರೆ.
ಮೋರಿಗಳೂ ಬ್ಲಾಕ್.
ಈ ಬಾರಿಯೂ ಅದೇ ಚಾಳಿ ಮುಂದುವರಿಸಿರುವ ಭಟ್ಟರು ನದಿಯ ಒಂದರ್ಧ ಭಾಗವನ್ನೇ ನುಂಗಲು ಹೊರಟಿದ್ದು, ಗರ್ಡಾಡಿ-ನಾಲ್ಕೂರು ಸಂಪರ್ಕಿಸುವ ಸೇತುವೆಯ ಸಮೀಪದವರೆಗೂ ಮಣ್ಣು ಹಾಕಿ ನದಿಯ ದಡವನ್ನು ತಮ್ಮದೇ ಸ್ಥಳವೆಂಬಂತೆ ವಿಸ್ತರಿಸಲು ಮುಂದಾಗಿದ್ದಾರೆ. ಅಲ್ಲದೇ ಈಗಾಗಲೇ 1 ಎಕರೆಗೂ ಅಧಿಕ ನದಿಯ ದಡವನ್ನೇ ಕಬಳಿಕೆ ಮಾಡಿದ್ದಾರೆ.
ಅಕ್ಕಿ ಮಿಲ್ಗಳಿಂದ ಭತ್ತದ ಹೊಟ್ಟಿನ ಉಮಿಕರಿಯನ್ನು ತಂದು‌ ನದಿ ದಡಕ್ಕೆ ಹಾಕಿ ಅನಂತರ ಅದರ ಮೇಲೆ ನೂರಾರು ಲೋಡ್ ಮಣ್ಣು ತಂದು ಹಾಕಿದ್ದಾರೆ. ಪ್ರಾರಂಭದ ವರ್ಷದಲ್ಲಿ ಕಬಳಿಸಿದ ಭೂಮಿಯಲ್ಲಿ ಕೆಲವು ಗಿಡಗಳನ್ನು ನೆಟ್ಟಿದ್ದಾರೆ. ಇವರ ದುರಾಸೆಯಿಂದ ನಾಲ್ಕೈದು‌ ವರ್ಷದಲ್ಲಿ ಫಲ್ಗುಣಿ ನದಿಯನ್ಮೇ ನುಂಗಿ ಬಿಡುತ್ತಾರೆಯೇ ಎನ್ನುವ ಆತಂಕ ಸ್ಥಳೀಯರದ್ದು. ಅಲ್ಲದೇ ಇದುವರೆಗೆ ಸುಮ್ಮನಿದ್ದ ಸ್ಥಳೀಯರು ಈ ಭಾರಿ ನದಿಯ ಮೇಲೆ ಹೀಗೆ ದೌರ್ಜನ್ಯ ಎಸಗುವುದನ್ನು ವಿರೋಧಿಸುತ್ತಿದ್ದು ಕ್ರಮಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಸೇತುವೆಯ ಮತ್ತೊಂದು ಭಾಗದ ಮೋರಿಗಳೂ ಬ್ಲಾಕ್ ಆಗುವಂತೆ ಮಣ್ಣು ಹಾಕಿದ್ದು, ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ಸಮಸ್ಯೆಯಾಗಲಿದೆ ಎನ್ನಲಾಗುತ್ತಿದೆ.
 ಸಾಧಕ ಭಟ್ಟರಿಗೇಕೆ ಇಂಥ ದುರಾಸೆ?
ಹೇಳಿ ಕೇಳಿ ಈ ಭಟ್ಟರು ಕೃಷಿಯಲ್ಲಿ ಸಾಧನೆ ಮಾಡಿದವರು. ಈಗಾಗಲೇ ಅವರ ಬಗ್ಗೆ ಹಲವು‌ ಲೇಖನಗಳೂ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಆದರೆ ಕೃಷಿಯಲ್ಲಿ ಸಾಧನೆ ಮಾಡಿದ ಭಟ್ಟರಿಗೆ ಪೃಕೃತಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ದುರಂತ. ನದಿಯನ್ನೇ ನುಂಗಲು ಹೊರಟಿರುವುದು ಅದೇನು ದುರಾಸೆ? ಎಂದು ಆ ಭಾಗದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಸ್ಥಳೀಯ ಆಡಳಿತ ಕೈ ಕಟ್ಟಿ‌ ಕುಳಿತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ನಮ್ಮ ಕಾಳಜಿ.
ನದಿಯೆಂದರೆ ತಾಯಿಯೆಂದು ಪೂಜಿಸುವುದು ನಮ್ಮ ಸಂಸ್ಕೃತಿ. ನಮ್ಮ ಅನೇಕ‌ ಪುರಾಣ ಕಥೆಗಳು ಅದಕ್ಕೆ ಸಾಕ್ಷಿಯಿವೆ. ನದಿಯಿದ್ದರೆ ಮಾತ್ರ ಒಂದು ಪ್ರದೇಶ, ಜೀವಜಲ‌ ಉಳಿಯಬಹುದು. ಇಲ್ಲದಿದ್ದರೆ ಬರಡಾಗುವುದು. ನದಿಯಿಂದ ಎಲ್ಲವನ್ನು ಪಡೆದ ನಾವು ಅದರ ಮೇಲೆಯೇ ದೌರ್ಜನ್ಯ ವೆಸಗುವುದು ಎಷ್ಟು ಸರಿ? ನದಿ, ಪ್ರಕೃತಿಯ ಮೇಲೆ ಈ ರೀತಿಯ ದಾಳಿ ಕಂಡುಬಂದರೆ ಉಡುಪಿ‌ ಎಕ್ಸ್ಪ್ರೆಸ್ ಸಂಸ್ಥೆಗೆ ತಿಳಿಸಬಹುದು. ನೀರು, ಪರಿಸರದ ಸಂರಕ್ಷಣೆಗೆ ನಾವೆಲ್ಲರು ಪ್ರಯತ್ನಿಸೋಣ.