ತೆರಿಗೆ ವಂಚನೆ ತನಿಖೆ: ಬಿಬಿಸಿ ಯ ದೆಹಲಿ, ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಸಮೀಕ್ಷೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯ 15 ಅಧಿಕಾರಿಗಳ ತಂಡ ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿತು. ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಬಿಬಿಸಿ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಲಾಖೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಅದರ ಭಾರತೀಯ ಅಂಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಮೀಕ್ಷೆಯ ಭಾಗವಾಗಿ, ಆದಾಯ ತೆರಿಗೆ ಇಲಾಖೆಯು ಕಂಪನಿಯ ವ್ಯವಹಾರಿಕ ಆವರಣವನ್ನು ಮಾತ್ರ ಒಳಗೊಳ್ಳುತ್ತದೆ ಮತ್ತು ಅದರ ಪ್ರವರ್ತಕರು ಅಥವಾ ನಿರ್ದೇಶಕರ ನಿವಾಸಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ. ವಿವರಗಳ ಪ್ರಕಾರ, ಉದ್ಯೋಗಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಅವರನ್ನು ಮನೆಗೆ ಹೋಗುವಂತೆ ಕೇಳಲಾಯಿತು. ಬಿಬಿಸಿಯ ದೆಹಲಿ ಕಚೇರಿಯಲ್ಲಿ ಮಧ್ಯಾಹ್ನ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಯಿತು.

ಉರ್ದು ವಿಭಾಗವನ್ನು ನೋಡಿಕೊಳ್ಳುವ ಇಬ್ಬರು ಸಿಬ್ಬಂದಿ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು ಕಚೇರಿ ಆವರಣದಲ್ಲಿ ಇದ್ದರು ಎನ್ನಲಾಗಿದೆ.

ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದು, ಅದಾನಿ ವಿಷಯದ ಬಗ್ಗೆ ಜೆಪಿಸಿ ಕೇಳಿದರೆ, ಸರಕಾರ ಬಿಬಿಸಿ ಹಿಂದೆ ಬಿದ್ದಿದೆ. ವಿನಾಶ ಕಾಲೇ ವಿಪರೀತ ಬುದ್ದಿ ಎಂದು ಆರೋಪಿಸಿದೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಇದನ್ನು ವೈಚಾರಿಕ ತುರ್ತುಪರಿಸ್ಥಿತಿ ಎಂದು ಹೇಳಿದ್ದಾರೆ.