ಉಡುಪಿ: ಜಿಲ್ಲೆಯ ಕಾರ್ಕಳ ಮತ್ತು ಉಡುಪಿಯಲ್ಲಿ ಉದ್ಯಮಿ, ರಾಜಕಾರಣಿಯೊಬ್ಬರ ಹಾಗೂ ಕ್ರಷರ್ ಮಾಲೀಕರೊಬ್ಬರ ಮನೆ, ಕಚೇರಿಗಳ ಮೇಲೆ ಬುಧವಾರ ಬೆಳ್ಳಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡ ಮತ್ತು ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತು ಕ್ರಷರ್ ಮಾಲೀಕ ಜಾಯ್ ಅವರ ಮನೆ, ಕಚೇರಿ ಹಾಗೂ ಕಾರ್ಖಾನೆಗಳಿಗೆ ಬೆಂಗಳೂರಿನ ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ. ಉದಯ ಕುಮಾರ್ ಶೆಟ್ಟಿಯವರ ಮನೆಗೆ ಐಟಿ ಅಧಿಕಾರಿಗಳು ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ಬಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮುನಿಯಾಲಿನಲ್ಲಿರುವ ಉದಯ ಕುಮಾರ್ ಶೆಟ್ಟಿ ಅವರ ಮನೆ, ಗೇರು ಕಾರ್ಖಾನೆ, ಕೋಟದಲ್ಲಿರುವ ಫಿಶ್ಮಿಲ್, ಮಣಿಪಾಲದ ಪೆರಂಪಳ್ಳಿಯಲ್ಲಿರುವ ಇನ್ನೊಂದು ಮನೆ ಸಹಿತ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿಯವರಿಗೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಇತರ ಉದ್ಯಮಿಗಳ ಮನೆ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ನಾಯಕರ ಕೈವಾಡ ಶಂಕೆ:
ಮುನಿಯಾಲು ಉದಯಕುಮಾರ್ ಶೆಟ್ಟಿ ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚೆಗೆ ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದು, ಇದು ಕೆಲ ಹಿರಿಯ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಅಲ್ಲದೆ, ಉದಯ ಕುಮಾರ್ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕಾರ್ಕಳ ಕ್ಷೇತ್ರದ ಟಿಕೆಟ್ಗಾಗಿ ಭಾರೀ ಹೋರಾಟ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಪಕ್ಷದಲ್ಲಿ ಇವರ ಬೆಳವಣಿಗೆಯನ್ನು ಸಹಿಸಿಕೊಳ್ಳದ ಹಾಗೂ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು, ಈ ಐಟಿ ದಾಳಿಯ ಹಿಂದೆ ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.