ಕಾರ್ಯಕರ್ತರ ಆಶೋತ್ತರಗಳಿಗೆ ಸ್ಪಂದಿಸುವುದು ಪಕ್ಷ ಮುಖಂಡರ ಕರ್ತವ್ಯ: ಗುರ್ಮೆ ಸುರೇಶ್ ಶೆಟ್ಟಿ

ಕಾಪು: ಪಕ್ಷದ ಕಚೇರಿ ದೇವಸ್ಥಾನಕ್ಕೆ ಸಮಾನ, ಇಲ್ಲಿಗೆ ಬರುವ ಪ್ರತಿಯೊಬ್ಬ ಕಾರ್ಯಕರ್ತನ ಆಶೋತ್ತರಗಳಿಗೂ ಸ್ಪಂದಿಸುವುದು ಜನಪ್ರತಿನಿಧಿಗಳು, ಪಕ್ಷದ ಮುಖಂಡರ ಕರ್ತವ್ಯವಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಅವರು ಸೋಮವಾರ ಪಟ್ಟಣದ ಮಂಜುಶ್ರೀ ಎನ್‌ಕ್ಲೇವ್‌ಗೆ ಸ್ಥಳಾಂತರಗೊಂಡ ಬಿಜೆಪಿಯ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪಕ್ಷಕ್ಕೆ ಅದೃಷ್ಟ ತಂದುಕೊಟ್ಟಿರುವ ಚುನಾವಣಾ ಕಚೇರಿಯನ್ನೇ ಪಕ್ಷದ ಅಧಿಕೃತ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ವಾರಕ್ಕೊಮ್ಮೆ ಇಲ್ಲಿನ ಕಚೇರಿಯಲ್ಲಿದ್ದು ಕಾರ್ಯಕರ್ತರ ಅಹವಾಲು ಸ್ವೀಕಾರ ಮಾಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಬಿಜೆಪಿ ಸಂಘಟನೆ ಮತ್ತು ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಪಕ್ಷಕ್ಕೆ ಕಾರ್ಯಕರ್ತರೇ ಮುಖ್ಯ ಆಸ್ತಿಯಾಗಿದ್ದು ಕಾರ್ಯಕರ್ತರ ನೋವು-ನಲಿವುಗಳಿಗೆ ಸ್ಪಂದಿಸುವುದು ಪಕ್ಷದ ಜವಾಬ್ದಾರಿ. ಕಾರ್ಯಕರ್ತರು ಪಕ್ಷದ ವೇದಿಕೆ, ಕಚೇರಿಯಲ್ಲೇ ತಮ್ಮ ಅಹವಾಲು ನೀಡಬೇಕಿದ್ದು, ಕಚೇರಿ ತೆರೆದಿರುವುದು ಸ್ವಾಗತಾರ್ಹ. ಮುಂದಿನ ಚುನಾವಣೆಗಳಿಗೆ ಪೂರಕವಾಗಿ ಇಲ್ಲಿಂದಲೇ ಸಿದ್ಧತೆ ನಡೆಸೋಣ ಎಂದರು.

ಬಿಜೆಪಿ ಹಿರಿಯ ನಾಯಕಿ ಶೀಲಾ ಕೆ. ಶೆಟ್ಟಿ ಎರ್ಮಾಳು ಕಚೇರಿ ಉದ್ಘಾಟಿಸಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಉಪಾಧ್ಯಕ್ಷ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಚುನಾವಣಾ ಉಸ್ತುವಾರಿ ಸುಲೋಚನ ಭಟ್, ಕಾಪು ಮಂಡಲ ಪ್ರಭಾರಿ ರವೀಂದ್ರ ಮಡಿವಾಳ, ಕಟ್ಟಡದ ಮಾಲಕ ಪ್ರಸಾದ್ ಕಾಮತ್ ಕಾಪು, ಪಕ್ಷದ ಮುಖಂಡರಾದ ಸುರೇಂದ್ರ ಪಣಿಯೂರು, ಗುರುಪ್ರಸಾದ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಗಂಗಾಧರ ಸುವರ್ಣ, ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ ರಾಜ್ಯ, ಜಿಲ್ಲೆ, ಮಂಡಲದ ಪದಾಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಪುರಸಭೆ ಸದಸ್ಯರು, ಜನಪ್ರತಿನಿಧಿಗಳು ಇದ್ದರು.

ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ನಿರೂಪಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು ವಂದಿಸಿದರು.