ಹಿರಿಯ ಅಪೇಕ್ಷೆ ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ: ಪುತ್ತಿಗೆ ಶ್ರೀ

ಉಡುಪಿ: ನಮ್ಮ ಪೂರ್ವಜರನ್ನು ಸ್ಮರಿಸಿ ಅವರ ಅನುಗ್ರಹ ಪಡೆಯಲು ಶ್ರಾದ್ಧಾದಿ ಶಾಸ್ತ್ರೀಯ ಕರ್ತವ್ಯಗಳನ್ನು ನಡೆಸುತ್ತೇವೆ. ಅದೇ ರೀತಿ ಅವರ ಸಾತ್ವಿಕ ಅಪೇಕ್ಷೆಗಳನ್ನು ಈಡೇರಿಸುವುದು ಅಥವಾ ಅವರ ಆಶಯದಂತೆ ನಡೆದುಕೊಳ್ಳುವುದು ಸಹ ಶ್ರಾದ್ಧ ಕಾರ್ಯಕ್ಕೆ ಸಮ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.

ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರಿಂದ ಸ್ಥಾಪಿತವಾದ ಈಶಾವಾಸ್ಯ ಪ್ರತಿಷ್ಠಾನ ಉಡುಪಿ- ಬೆಂಗಳೂರು ಇದರ ವತಿಯಿಂದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ನಡೆದ ಹಿರಿಯರ ನೆನಪು-2021 ಸಂಸ್ಕೃತಿ ಸಂಭ್ರಮ‌ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.

ಬನ್ನಂಜೆಯವರಂತಹ ಧೀಮಂತರು ನಡೆಸಿದ ವಾಙ್ಮಯ ಸೇವೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮತ್ತು ಅವರು ನಡೆಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕರ್ತವ್ಯಗಳನ್ನು ಮುನ್ನಡೆಸುವುದು ಅತೀ ಅವಶ್ಯವಾಗಿದೆ. ಅಕ್ಷರಶಃ ಜ್ಞಾನದೂತನಂತೆಯೇ ಬದುಕಿ ಮಧ್ವಶಾಸ್ತ್ರ ಪ್ರಸಾರ, ಭಗವಂತನ ಭಕ್ತಿ ಸಂದೇಶದ ಪ್ರಸಾರ ಕಾರ್ಯಗಳನ್ನು ತಪಸ್ಸಿನಂತೆ ಆಚರಿಸಿದ ಅವರ ಅಪೂರ್ವ ನಡೆಗಳಲ್ಲಿ ಹೆಜ್ಜೆ ಇಡುವುದೂ ಶ್ರೇಷ್ಠ ಕಾರ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.

ಬನ್ನಂಜೆಯವರು ಅವರ ಹಿರಿಯರ ನೆನಪಿನಲ್ಲಿ ಸಮಾಜದ ಸಾಧಕರನ್ನು ಗೌರವಿಸುವ ಸಂಪ್ರದಾಯವನ್ನು ಮುನ್ನಡೆಸುವ ಆಶಯದಂತೆ ಉಡುಪಿಯ ಪ್ರಸಿದ್ಧ ವಿದ್ವಾಂಸ ಡಾ ರಾಮನಾಥ ಆಚಾರ್ಯ ಮತ್ತು ಬೆಂಗಳೂರಿನ ಪ್ರಸಿದ್ಧ ಹೋಮಿಯೋಪತಿ ವೈದ್ಯ ಡಾ. ಎಚ್.ಎಸ್. ವೆಂಕಟೇಶ್ ಅವರಿಗೆ ಜ್ಞಾನ ದೇಗುಲ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.‌

ಪ್ರತಿಷ್ಠಾನದ ವತಿಯಿಂದ ಪುನರ್ ಪ್ರಕಟಿಸಲಾದ ಬನ್ನಂಜೆಯವರ ಪುರಂದರೋಪನಿಷತ್ತು ಮತ್ತು ತಲವಕಾರೋಪನಿಷತ್ತು‌ ( ಬನ್ನಂಜೆ ಭಾಷ್ಯ ಸಹಿತ) ಕೃತಿಗಳನ್ನು ಪುತ್ತಿಗೆ ಶ್ರೀಗಳು ಲೋಕಾರ್ಪಣೆಗೊಳಿಸಿದರು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ಬನ್ನಂಜೆಯವರಂತಹ ಮಹಾಜ್ಞಾನಿಗಳ ಅಲ್ಪ ಒಡನಾಟವೂ ಪೂರ್ವರ್ಜನ್ಮದ ಸುಕೃತವೇ ಆಗಿದೆ.‌ ಅವರ ಸಾಹಿತ್ಯದ ಕೊಡುಗೆಗಳು ಅನುಗಾಲ ಸ್ಮರಣೀಯ ಎಂದರು.‌

ಶ್ರೀ ಕ್ಷೇತ್ರ ಅಂಬಲಪಾಡಿಯ ಆಡಳಿತ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಉಪಸ್ಥಿತರಿದ್ದರು .
ಡಾ. ರಾಮನಾಥ ಆಚಾರ್ಯರು ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿ ಬನ್ನಂಜೆಯವರ ಶಿಷ್ಯರು ಅಭಿಮಾನಿಗಳು ಹಿತೈಷಿಗಳು ಎಲ್ಲರೂ ಸೇರಿ ಅವರ ಎಲ್ಲ ಸಾಹಿತ್ಯಿಕ ಕೃತಿಗಳನ್ನು ಜಿಜ್ಞಾಸುಗಳಿಗೆ ಯಥಾವತ್ ತಲುಪಿಸುವ ಕೆಲಸ ಮಾಡಬೇಕು ಎಂದರು.

ಪ್ರತಿಷ್ಠಾನದ ಅಧ್ವರ್ಯು ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿ‌, ಪ್ರಾಸ್ತಾವಿಕವಾಗಿ ಮಾತನಾಡಿದರು. ಬನ್ನಂಜೆಯವರ ಸುಪುತ್ರ ವಿನಯಭೂಷಣ ಆಚಾರ್ಯ ವಂದಿಸಿದರು.
ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಅಭಿರಾಮ್, ವಿಘ್ನೇಶ್ , ಪ್ರಶಾಂತ್ ಶೆಟ್ಟಿ ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಮತ್ತು ಅವರ ಸುಪುತ್ರಿ ಯುವ ಗಾಯಕಿ ಗಾರ್ಗಿ ಸುದೀಪ್ ಅವರಿಂದ “ರಾಗಧಾರಾ” ಯಕ್ಷ – ಭಕ್ತಿ – ಸುಗಮ ಸಂಗೀತ ಯುಗಳ ಗಾಯನ ನಡೆಯಿತು .