ಉಡುಪಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೊಳಿಸುವಲ್ಲಿ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ.
ರಾಜ್ಯದ ಜನರಿಗೆ ಗ್ಯಾರಂಟಿ ಕಾರ್ಡ್ ತೋರಿಸಿ ಪ್ರಚಾರ ಮಾಡಿದ ಕಾಂಗ್ರೆಸ್ ನಾಯಕರು ಇದೀಗ ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಆರೋಪಿಸುವ ಮೂಲಕ ತಮ್ಮ ಗ್ಯಾರಂಟಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಗೃಹ ಲಕ್ಷ್ಮಿ ಯೋಜನೆಯನ್ನು ಸರ್ಕಾರ ಮುಂದೂಡಿದ್ದು, ಪೂರ್ವ ತಯಾರಿಯಿಲ್ಲದೇ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 200 ಯೂನಿಟ್ ವಿದ್ಯುತ್ ಉಚಿತ ಘೋಷಿಸಿ ಇದೀಗ ನಿಬಂಧನೆಗಳನ್ನು ವಿಧಿಸಿದ್ದು ಗ್ಯಾರಂಟಿ ಕಾರ್ಡ್ ವಿತರಿಸುವಾಗ ಇದು ನೆನಪಾಗಲಿಲ್ಲವೇ?
ಉಚಿತ, ಉಚಿತ ಎಂದು ಘೋಷಿಸಿ ವೋಟ್ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್, ಯೋಜನೆಗಳನ್ನು ಅನುಷ್ಠಾನಗೊಳಸಲು ವಿಳಂಬ ಮಾಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.