ಉಡುಪಿ: ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಸ್ಫೂರ್ತಿಯನ್ನು ತುಂಬುವುದು ಅಗತ್ಯ. ಹೊಸತನದ ಚಿಂತನೆಯೊಂದಿಗೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪದವಿಪೂರ್ವ ವಿಭಾಗದಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ದಾಖಲಾಗುವ ಕೂಟ ದಾಖಲೆಯನ್ನು ಸಮತೂಕವಾಗಿ ದಾಖಲಿಸುವ ನಿಟ್ಟಿನಲ್ಲಿ ಫೋಟೋ ಫಿನಿಶಿಂಗ್ ಬಳಸುತ್ತಿರುವುದು ಅಭಿನಂದನಾರ್ಹ ಎಂದು ಶಾಸಕ ಕೆ.ರಘಪತಿ ಭಟ್ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ, ರಜತ್ರಾದಿ,ಮಣಿಪಾಲ, ಉಡುಪಿ, ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು, ನಾಗಬನ ಕ್ಯಾಂಪಸ್ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಉಡುಪಿ ಇಲ್ಲಿ ಆಯೋಜಿಸಿದ್ದ 2022-23 ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಕ್ರೀಡಾಳುಗಳಿಗೆ ಶುಭ ಹಾರೈಸಿ, ರಾಜ್ಯದಲ್ಲಿ ಮೂರು ಅಥ್ಲೆಟಿಕ್ಸ್ ಲ್ಯಾಬ್ ಗಳು ಆರಂಭವಾಗುತ್ತಿದ್ದು ಅದರಲ್ಲಿ ಒಂದು ಉಡುಪಿಯಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ದಿ ಮೈಸೂರು ಎಲೆಕ್ಟ್ರಿಕ್ ಇಂಡಸ್ಟೀಸ್ ಲಿಮಿಟೆಡ್, ಬೆಂಗಳೂರು ಇದರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ, ಶಿಸ್ತು, ಸಮಯ ಪರಿಪಾಲನೆ ಮಾತ್ರವಲ್ಲದೆ ಕ್ರೀಡಾ ಕ್ಷೇತ್ರದಲ್ಲಿಯೂ ಅತ್ಯುತ್ತಮ ಸಾಧನೆಯನ್ನು ಮಾಡುತ್ತಿವೆ. ಕ್ರೀಡಾಳುಗಳು ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತಲೂ ಭಾಗವಹಿಸುವಿಕೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು ಎಂದರು.
ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಕ್ರೀಡಾಳುಗಳಿಗೆ ಶುಭ ಹಾರೈಸಿ, ಈ ಬಾರಿ ಫೊಟೋ ಫಿನಿಶಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಂದಿನ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗಗಳಲ್ಲಿ ದಾಖಲಾಗುವ ಕೂಟ ದಾಖಲೆಯನ್ನು, 2013-24ರಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮುರಿಯುವ ಕ್ರೀಡಾ ಸಾಧಕರಿಗೆ ತಲಾ ರೂ. 2000 ನಗದು ಬಹುಮಾನವನ್ನು ಅಜೆಕಾರ್ ಪದ್ಮಗೋಪಾಲ್ ಟ್ರಸ್ಟ್ ವತಿಯಿಂದ ನೀಡಲಾಗುವುದು ಎಂದು ಸಭೆಯಲ್ಲಿ ಘೋಷಿಸಿ,ಕ್ರೀಡಾಳುಗಳು ಕೇವಲ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗಷ್ಟೇ ಸೀಮಿತವಾಗಿರದೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆಯನ್ನು ತರುವ ಕ್ರೀಡಾಳುಗಳಾಗಿ ರೂಪುಗೊಳ್ಳಬೇಕು ಎಂದರು.
ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ,ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಎ.ರಾಜವೇಲು, ಪದವಿಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಕ್ರೀಡಾ ಸಂಯೋಜಕರ ದಿನೇಶ್ ಕುಮಾರ್ ಎ, ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಸ್ವಾಗತಿಸಿ, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ.ಕೊಡವೂರು ವಂದಿಸಿದರು. ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.