ನವದೆಹಲಿ: ಕರೊನಾದ ವಿರುದ್ಧ ಹೋರಾಡಲು ಅತ್ಯಂತ ಅವಶ್ಯಕವಾಗಿರುವುದು ಪ್ರತಿಯೊಬ್ಬ ನಾಗರಿಕರು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು. ಈ ಹಿನ್ನೆಲೆಯಲ್ಲಿ ನಮ್ಮ ಅತ್ಯಂತ ಪ್ರಾಚೀನ ಪರಂಪರೆಯಿಂದ ಬಂದಿರುವ ಆಯುರ್ವೇದಕ್ಕೆ ಮೊರೆ ಹೋಗುವುದು ಇಂದಿನ ಅವಶ್ಯಕತೆಯಾಗಿದೆ. ಆಯುರ್ವೇದದಿಂದ ನಾವು ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಬೇರೆ ಬೇರೆ ದೇಶಗಳ ಜನರು ಕೂಡ ಆಯುರ್ವೇದದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವುದು ನಮ್ಮ ಭಾರತದ ಹಿರಿಮೆ ಎಂದೇ ಹೇಳಬೇಕು. ಇದರ ಜತೆಗೆ ಯೋಗಾಭ್ಯಾಸ ಕೂಡ ಇಂದಿನ ಅನಿವಾರ್ಯತೆಯಾಗಿದೆ. ನಮ್ಮ ದೇಹವನ್ನು ಸಾಕಷ್ಟು ಚೈತನ್ಯಪೂರ್ಣವಾಗಿ ಇಟ್ಟುಕೊಳ್ಳಬಹುದು.
ಹಾಲಿವುಡ್ನಿಂದ ಹರಿದ್ವಾರದವರೆಗೆ ಅನೇಕ ಮಂದಿ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಮುಂದಿನ ತಿಂಗಳು 21ನೇ ಅಂತಾರಾಷ್ಟ್ರೀಯ ಯೋಗ ದಿನವಿರುವ ಹಿನ್ನೆಲೆಯಲ್ಲಿ, ಚಿಕ್ಕದೊಂದು ಸ್ಪರ್ಧೆ ಏರ್ಪಡಿಸಿದ್ದಾರೆ. ಮೂರು ನಿಮಿಷಗಳ ಯೋಗಾಸನದ ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡುವಂತೆ ಅವರು ಸಲಹೆ ನೀಡಿದರು.
ಸ್ವಸಹಾಯ ಸಂಘಗಳ ಮಹಿಳೆಯರು ಮಾಸ್ಕ್ ತಯಾರಿಕೆ:
ಭಾರತದಲ್ಲಿ ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವೈರಸ್ ನಿಯಂತ್ರಣದಲ್ಲಿ ಇದೆ. ಇದಕ್ಕೆ ಪ್ರತಿಯೊಬ್ಬ ಪ್ರಜೆಗಳ ಕೊಡುಗೆಯೂ ಇದೆ ಎಂದು ಅವರು ಹೇಳಿದರು.
ಲಾಕ್ಡೌನ್ ಸಮಯದಲ್ಲಿ ದೇಶದ ವಿವಿಧ ಭಾಗಗಳ ಜನರು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದು, ಕೆಲವರು ಒಳ್ಳೊಳ್ಳೆ ಸಂಶೋಧನೆಗಳನ್ನೂ ಮಾಡುವ ಮೂಲಕ ವೈರಸ್ ವಿರುದ್ಧದ ಹೋರಾಟದಲ್ಲಿ ನೆರವು ನೀಡಿದ್ದಾರೆ. ಜತೆಗೆ, ಅನೇಕ ಸ್ವಸಹಾಯ ಸಂಘಗಳ ಮಹಿಳೆಯರು ಸೇರಿದಂತೆ ಅನೇಕ ಮಹಿಳೆಯರು ಮಾಸ್ಕ್ ತಯಾರಿಸಿ ಅದನ್ನು ಕಡಿಮೆ ಬೆಲೆಗೆ ನೀಡಿದ್ದಾರೆ. ಮಹಿಳೆಯರು ಈ ರೀತಿಯ ಪ್ರಶಂಸಾರ್ಹ ಕಾರ್ಯ ಮಾಡುವ ಮೂಲಕ ವೈರಸ್ ತೊಲಗಿಸಲು ತಮ್ಮದೇ ಆದ ಕೊಡುಗೆ ನೀಡಿರುವುದು ನಿಜಕ್ಕೂ ಅಭಿನಾಂದರ್ಹವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಾಸ್ಕ್ ಗಳನ್ನು ಧರಿಸಿ ಮುಂಜಾಗ್ರತಾ ಕ್ರಮ ವಹಿಸಿ:
ದೇಶದಲ್ಲಿ ಈ ಬಾರಿ ಲಾಕ್’ಡೌನ್ ಸಡಿಲಗೊಂಡಿದೆ. ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಜನರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಹೆಜ್ಜೆ ಇಡುವ ಅಗತ್ಯವಿದೆ. ಶ್ರಮಿಕ ವಿಶೇಷ ರೈಲು ಸೇರಿದಂತೆ ಇತರ ರೈಲು ಹಾಗೂ ವಿಮಾನ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಜನರು ಗೊಂದಲಕ್ಕೆ ಒಳಗಾಗದೇ ಎಚ್ಚರಿಕೆಯಿಂದಿರಬೇಕಿದೆ.
ಇದರ ಜತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದು, ಸಾಮಾಜಿಕ ಅಂತರಗಳು ಹೆಚ್ಚಾಗಬೇಕಿದೆ. ಸಾಧ್ಯವಾದಷ್ಟು ಮಾಸ್ಕ್ ಗಳನ್ನು ಧರಿಸಿ, ಮನೆಗಳಲ್ಲಿಯೇ ಹೆಚ್ಚು ಕಾಲ ಕಳೆಯುವುದಕ್ಕೆ ಪ್ರಯತ್ನಿಸಿ ಎಂದರು.
ಹೆಚ್ಚು ಹೆಚ್ಚು ದೇಶೀಯ ಉತ್ಪನ್ನಗಳ ಬಳಕೆ:
ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ದೇಶವನ್ನು ಆತ್ಮ ನಿರ್ಭರವನ್ನಾಗಿ ಮಾಡಲು ಜನತೆ ಸಹಕರಿಸಬೇಕು. ಹೆಚ್ಚು ಹೆಚ್ಚು ದೇಶೀಯ ಉತ್ಪನ್ನಗಳನ್ನು ಬಳಕೆ ಮಾಡಿದರೆ ಖಂಡಿತವಾಗಿಯೂ ಈ ಯೋಜನೆ ಸಫಲವಾಗುತ್ತದೆ ಎಂದು ಜನತೆಗೆ ಕರೆ ನೀಡಿದರು.
ಆಯುಷ್ಮಾನ್ ಯೋಜನೆ ಮೂಲಕ ಒಂದು ಕೋಟಿಗಳು ಅಧಿಕ ರೋಗಿಗಳಿಗೆ ಸಹಾಯ ಮಾಡಿದ್ದೇವೆ. ಫಲಾನುಭವಿಗಳ ಸಂಖ್ಯೆ ಕೋಟಿಯನ್ನು ದಾಟಿದೆ. ಅನೇಕ ಫಲಾನುಭವಿಗಳ ಜತೆ ನಾನು ಮಾತುಕತೆ ನಡೆಸಿದ್ದು, ಅವರೆಲ್ಲರೂ ತಮಗಾಗಿರುವ ಸಹಾಯದ ಬಗ್ಗೆ ತಿಳಿಸಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತಾರ ಮಾಡುವ ಮೂಲಕ ಪ್ರತಿಯೊಬ್ಬ ಅರ್ಹರಿಗೂ ಈ ಯೋಜನೆ ತಲುಪಿಸುವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.