ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಆತ್ಮವಿಶ್ವಾಸದ ಆಟದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಗಮನ ಸೆಳೆದಿರುವ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೈದಾನದಲ್ಲಿ ಅನುಭವಿ ಆಟಗಾರನಂತೆ ಬ್ಯಾಟ್ ಬೀಸುತ್ತಿರುವ ಸೂರ್ಯವಂಶಿ ಅವರ ವಯಸ್ಸಿನ ಕುರಿತು ಈ ಹಿಂದೆ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ರಣವೀರ್ ಅಲ್ಲಾಹಬಾಡಿಯಾ ಅವರೊಂದಿಗೆ ಮಾತನಾಡಿದ ಬ್ರೆಟ್ ಲೀ, ಸೂರ್ಯವಂಶಿ ಅವರ ವಯಸ್ಸಿನ ಬಗ್ಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಚರ್ಚೆ ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
“ಆತನಿಗೆ 15 ವರ್ಷವೋ, 16, 17 ಅಥವಾ 18 ವರ್ಷವೋ ಎಂಬುದು ನನಗೆ ಮುಖ್ಯವಲ್ಲ. ಆತ ಉನ್ನತ ಮಟ್ಟದ ಕ್ರಿಕೆಟ್ ಆಡಬಲ್ಲ ಎಂಬುದಷ್ಟೇ ಮುಖ್ಯ. 15 ವರ್ಷವಾಗಿದ್ದರೆ ಅದ್ಭುತ. 17 ಅಥವಾ 18 ವರ್ಷವಾಗಿದ್ದರೂ ಯಾವುದೇ ಸಮಸ್ಯೆಯಿಲ್ಲ. ಆತ ಅತ್ಯುತ್ತಮ ಕ್ರಿಕೆಟ್ ಆಡುತ್ತಾನೆ. ಭಾರತಕ್ಕೆ ಸಿಕ್ಕಿರುವ ದೊಡ್ಡ ಆಸ್ತಿ” ಎಂದು ಬ್ರೆಟ್ ಲೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೌನ್ಸರ್‌ಗಳಿಗೆ ಸಿಕ್ಸರ್ ಉತ್ತರ
ಐಪಿಎಲ್‌ನಲ್ಲಿ ಕಡಿಮೆ ಅವಧಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿರುವ ವೈಭವ್ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 97 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ವೇಗದ ಬೌಲರ್‌ಗಳ ಬೌನ್ಸರ್‌ಗಳನ್ನು ಕೂಡ ಆತ್ಮವಿಶ್ವಾಸದಿಂದ ಹುಕ್ ಶಾಟ್ ಮೂಲಕ ಸಿಕ್ಸರ್‌ಗಳಿಗೆ ಅಟ್ಟಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಸೂರ್ಯವಂಶಿ ಮೇಲೆ ಈಗಲೇ ದೊಡ್ಡ ನಿರೀಕ್ಷೆಗಳ ಒತ್ತಡ ಹೇರಬಾರದು. ಆತನನ್ನು ಸ್ವತಂತ್ರವಾಗಿ, ಮಗುವಿನಂತೆ ಆಟವನ್ನು ಆನಂದಿಸಲು ಬಿಡಬೇಕು ಎಂದು ಬ್ರೆಟ್ ಲೀ ಸಲಹೆ ನೀಡಿದ್ದಾರೆ.
‘ನಾನು ಬೌನ್ಸರ್ ಎಸೆಯಲು ಹಿಂಜರಿಯುತ್ತಿರಲಿಲ್ಲ’
ಸೂರ್ಯವಂಶಿ ಅವರ ಹುಕ್ ಹಾಗೂ ಪುಲ್ ಶಾಟ್‌ಗಳ ಸಾಮರ್ಥ್ಯವನ್ನು ಮೆಚ್ಚಿದ ಬ್ರೆಟ್ ಲೀ, ಇಂತಹ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡುವುದು ತನಗೆ ಇಷ್ಟ ಎಂದು ಹೇಳಿದ್ದಾರೆ.
“ಬ್ಯಾಟರ್ ಹುಕ್ ಮತ್ತು ಪುಲ್ ಶಾಟ್‌ಗಳನ್ನು ಉತ್ತಮವಾಗಿ ಆಡುತ್ತಿದ್ದರೆ, ಬೌಲರ್ ಹಾಗೂ ಬ್ಯಾಟರ್ ನಡುವೆ ನೈಜ ಸ್ಪರ್ಧೆ ನಡೆಯುತ್ತದೆ. ನಾನು ಆತನಿಗೆ ಬೌಲಿಂಗ್ ಮಾಡುತ್ತಿದ್ದರೆ ದೇಹದತ್ತ ಬೌನ್ಸರ್ ಎಸೆಯುತ್ತಿದ್ದೆ. ಆತ ಅದನ್ನು ಸಿಕ್ಸರ್‌ಗೆ ಅಟ್ಟಿದರೂ, ಮತ್ತೊಮ್ಮೆ ಬೌನ್ಸರ್ ಎಸೆಯಲು ನಾನು ಹಿಂಜರಿಯುತ್ತಿರಲಿಲ್ಲ” ಎಂದು ತಮ್ಮ ಬೌಲಿಂಗ್ ದಿನಗಳನ್ನು ಬ್ರೆಟ್ ಲೀ ನೆನಪಿಸಿಕೊಂಡಿದ್ದಾರೆ.
ಯುವ ಆಟಗಾರನ ವಯಸ್ಸಿನ ಚರ್ಚೆಗಿಂತ ಆತನ ಪ್ರತಿಭೆ ಹಾಗೂ ಆಟದ ಗುಣಮಟ್ಟವೇ ಮುಖ್ಯ ಎಂಬ ಸಂದೇಶವನ್ನು ಬ್ರೆಟ್ ಲೀ ಅವರ ಹೇಳಿಕೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.















