ಹೈದರಾಬಾದ್: 2023ರ ವರ್ಷವು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.2023ನೇ ವರ್ಷವು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ವರ್ಷವಾಗಿ ದಾಖಲಾಗಿದೆ. ಇಸ್ರೋದ ಸಾಧನೆ ಮತ್ತು ಮುಂದಿನ ಗುರಿಗಳ ಬಗ್ಗೆ ಒಂದು ಅವಲೋಕನ.
ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ರಾಷ್ಟ್ರ ಮತ್ತು ಒಟ್ಟಾರೆ ಚಂದ್ರನ ಮೇಲಿಳಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಯುನೈಟೆಡ್ ಸ್ಟೇಟ್ಸ್, ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಭಾರತದ ಸಾಧನೆ ಅಪ್ರತಿಮವಾದುದು. ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ -3 ಮಿಷನ್ ಅನ್ನು ಜುಲೈ 14, 2023ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ಡಿಎಸ್ಸಿ -ಶಾರ್) LVM3-M4 ವಾಹನದ ಮೂಲಕ ಆರಂಭವಾಗಿತ್ತು. ಆಗಸ್ಟ್ 23 ರಂದು ಲ್ಯಾಂಡಿಂಗ್ ದಿನದಂದು ಮಿಷನ್ ಚಂದ್ರನ ಮೇಲ್ಮೈಯಲ್ಲಿ ಐತಿಹಾಸಿಕ ಭೂಸ್ಪರ್ಶ ಮಾಡಿತು. ನಂತರ ಪ್ರಜ್ಞಾನ್ ರೋವರ್ ಅನ್ನು ನಿಯೋಜಿಸಲಾಯಿತು.
ಸೆಪ್ಟೆಂಬರ್ 7, 2019ರಂದು ಚಂದ್ರಯಾನ -2 ಕಾರ್ಯಾಚರಣೆಯ ವೈಫಲ್ಯದ ನಂತರ, ಮುಂದಿನ ನಾಲ್ಕೇ ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ 23, 2023 ರಂದು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿತು. ಅಂದು ಮಾತನಾಡಿದ್ದ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್, “ನಾವು ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ್ದೇವೆ. ಈಗ ಭಾರತ ಚಂದ್ರನ ಮೇಲಿದೆ” ಎಂದು ಹೆಮ್ಮೆಯಿಂದ ಹೇಳಿದರು.
ಮಿಷನ್ 2035 ರ ಹಾದಿಯಲ್ಲಿ ಒಂದು ಮೈಲಿಗಲ್ಲು: ಚಂದ್ರಯಾನ -3 ಮಿಷನ್, ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯುವ ಮೊದಲ ರಾಷ್ಟ್ರವಾಗುವುದು ಮಾತ್ರವಲ್ಲದೆ 2035 ರ ವೇಳೆಗೆ ಮೊದಲ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮತ್ತು ಚಂದ್ರನ ಮೇಲ್ಮೈಗೆ ಮೊದಲ ಭಾರತೀಯನನ್ನು ಕಳುಹಿಸುವ ಭಾರತದ ಮಿಷನ್ 2035 ಗೆ ಸಂಬಂಧಿಸಿದಂತೆ ಇದೊಂದು ಗೇಮ್ ಚೇಂಜರ್ ಎಂದೇ ಹೇಳಬಹುದು. ಚಂದ್ರಯಾನ -3 ಮಿಷನ್ನ ಯಶಸ್ಸು ಬಾಹ್ಯಾಕಾಶ ಸಂಶೋಧನೆಯನ್ನು ಖಾಸಗಿಯವರಿಗೆ ಮುಕ್ತಗೊಳಿಸಲು ದಾರಿ ಮಾಡಿದೆ.
ಭೂಮಿಗೆ ಮರಳಿ ಬಂದ ಪ್ರೊಪಲ್ಷನ್ ಮಾಡ್ಯೂಲ್: ಇಸ್ರೋ ವಿಜ್ಞಾನಿಗಳಿಗೆ ಚಂದ್ರನ ಮೇಲ್ಮೈ ಬಗ್ಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಅಲ್ಲಿ ಅಧ್ಯಯನ ಉದ್ದೇಶಗಳನ್ನು ಸಾಧಿಸಿದ ನಂತರ, ಚಂದ್ರಯಾನ್ -3 ಪ್ರೊಪಲ್ಷನ್ ಮಾಡ್ಯೂಲ್ 2023ರ ಅಕ್ಟೋಬರ್ 9 ರಂದು ಪ್ರಾರಂಭವಾದ ಸರಣಿ ಕಾರ್ಯಾಚರಣೆಗಳ ನಂತರ 22 ನವೆಂಬರ್ 2023ರಂದು ಭೂಮಿಯ ಕಕ್ಷೆಗೆ ಮರಳಿತು. ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ -3ರ ಸಾಫ್ಟ್ ಲ್ಯಾಂಡಿಂಗ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಮತ್ತೆ ಭೂಮಿಯ ಕಕ್ಷೆಗೆ ಮರಳುವ ನಡುವೆ, ಈ ಮಿಷನ್ ಚಂದ್ರನ ಮೇಲೆ ಎರಡನೇ ಹಾಪ್ ಮಾಡುತ್ತದೆ ಎಂದು ಇಸ್ರೋ ಭಾವಿಸಿತ್ತು, ಆದರೆ ಅದು ಸಂಭವಿಸಲಿಲ್ಲ.
ಮಿಷನ್ ಉದ್ದೇಶಗಳು: ಇಸ್ರೋ ವೆಬ್ಸೈಟ್ ಪ್ರಕಾರ, ಎಲ್ 1 ಪಾಯಿಂಟ್ಗೆ ಆಗಮಿಸಿದ ನಂತರ, ಮತ್ತೊಂದು ಕಾರ್ಯಾಚರಣೆಯು ಆದಿತ್ಯ-ಎಲ್ 1 ಅನ್ನು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳವಾದ ಎಲ್ 1ರ ಸುತ್ತಲಿನ ಕಕ್ಷೆಯಲ್ಲಿ ಬಂಧಿಸುತ್ತದೆ. ಎಲ್ 1 ಲ್ಯಾಗ್ರೇಂಜ್ ಪಾಯಿಂಟ್ನಲ್ಲಿನ ಕಾರ್ಯತಂತ್ರದ ಸ್ಥಾನದಿಂದ ಆದಿತ್ಯ-ಎಲ್ 1ಗೆ ಸೂರ್ಯನ ಸ್ಥಿರ, ತಡೆರಹಿತ ನೋಟ ಕಾಣಿಸಲಿದೆ ಎಂದು ಇಸ್ರೋ ಹೇಳಿದೆ. ಆದಿತ್ಯ ಎಲ್ 1 ಸೌರ ಮಿಷನ್ ಯಶಸ್ವಿ ಉಡಾವಣೆಯ ನಂತರ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ನವೆಂಬರ್ ನಲ್ಲಿ ಮಿಷನ್ ಜಾರಿಯಲ್ಲಿದೆ ಮತ್ತು ಅಂತಿಮ ಹಂತವನ್ನು ಸಮೀಪಿಸುತ್ತಿದೆ ಎಂದು ಹೇಳಿದರು.
ಇಸ್ರೋ ಮುಂದಿನ ದಾರಿ: ಮೊದಲ ಸೌಂಡಿಂಗ್ ರಾಕೆಟ್ ಉಡಾವಣೆಯ 60ನೇ ವರ್ಷಾಚರಣೆಯಂದು ಇಸ್ರೋ ಭಾರತದಲ್ಲಿ ಬಾಹ್ಯಾಕಾಶ ಉಡಾವಣೆಯ ಐತಿಹಾಸಿಕ ಅಂಶಗಳು ಮತ್ತು ಇಸ್ರೋದಲ್ಲಿನ ಬದಲಾವಣೆಗಳ ಬಗ್ಗೆ ದಾಖಲೆಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ಇಸ್ರೋ ಪ್ರಾರಂಭದಿಂದಲೂ ಬಹಳ ದೂರ ಸಾಗಿದೆ ಮತ್ತು ಈಗ ವಿಶ್ವ ದರ್ಜೆಯ ಪ್ರೊಪೆಲ್ಲಂಟ್ಗಳನ್ನು ಆಂತರಿಕವಾಗಿ ಉತ್ಪಾದಿಸುತ್ತಿದೆ ಎಂದು ಹೇಳಿದರು.
ಆದಿತ್ಯ-ಎಲ್ 1 ಮುಂದಿನ ತಿಂಗಳ ಆರಂಭದಲ್ಲಿ ತನ್ನ ಗಮ್ಯಸ್ಥಾನವಾದ ಲ್ಯಾಗ್ರೇಂಜ್ ಪಾಯಿಂಟ್ 1 ಅನ್ನು ತಲುಪಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಸೋಮವಾರ ಹೇಳಿದ್ದಾರೆ.
ಇಸ್ರೋ ಮುಂದಿವೆ ದೊಡ್ಡ ಗುರಿಗಳು: ಚಂದ್ರಯಾನ -3 ಮಿಷನ್ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ನಂತರ, ಇಸ್ರೋ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ಡಿಎಸ್ಸಿ) ಇಸ್ರೋ ಸೆಪ್ಟೆಂಬರ್ 2 ರಂದು ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ಸೌರ ಮಿಷನ್ ಪ್ರಾರಂಭಿಸಿತು. ನಂತರದ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನೌಕೆಯು 125 ದಿನಗಳಲ್ಲಿ ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ಪ್ರಯಾಣಿಸಿತು ಮತ್ತು ಸೂರ್ಯನಿಗೆ ಹತ್ತಿರವೆಂದು ಪರಿಗಣಿಸಲಾದ ಲ್ಯಾಗ್ರಾಂಜಿಯನ್ ಬಿಂದು ಎಲ್ 1 ಸುತ್ತಲೂ ಹ್ಯಾಲೋ ಕಕ್ಷೆಯಲ್ಲಿ ಇರಿಸುವ ನಿರೀಕ್ಷೆಯಿದೆ. ಸೌರ ಮೇಲ್ಮೈಯನ್ನು ತನಿಖೆ ಮಾಡುವ ಇತರ ಕಾರ್ಯಗಳ ನಡುವೆ, ಭಾರತದ ಆದಿತ್ಯ ಎಲ್ 1 ಮಿಷನ್ ಸೂರ್ಯನ ಚಿತ್ರಗಳನ್ನು ಸೆರೆಹಿಡಿದು ಅವನ್ನು ವೈಜ್ಞಾನಿಕ ಪ್ರಯೋಗಗಳಿಗಾಗಿ ಇಸ್ರೋಗೆ ರವಾನಿಸಲಿದೆ.