ಬೆಂಗಳೂರು: ಭಾನುವಾರ ನಡೆಸಿದ ಚಂದ್ರನ ಕಕ್ಷೆ ಸೇರ್ಪಡೆಯನ್ನು (ಎಲ್ಒಐ) ಒಳಗೊಂಡ ತನ್ನ ಮೂರನೇ ಚಂದ್ರಯಾನ ಕಾರ್ಯಾಚರಣೆಯನ್ನು ಇಸ್ರೊ ಪೂರ್ಣಗೊಳಿಸಿದೆ.ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಚಂದ್ರನಿಗೆ ಅತ್ಯಂತ ಹತ್ತಿರಕ್ಕೆ ತಲುಪಿದೆ.ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನಿಗೆ ತೀರಾ ಹತ್ತಿರಕ್ಕೆ ತಲುಪಿದ್ದು, ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇಸ್ರೊ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು.
ಸೋಮವಾರ ಇಸ್ರೋ ಚಂದ್ರಯಾನ -3 ರ ಎತ್ತರವನ್ನು ಸುಮಾರು 14,000 ಕಿಮೀ ಕಡಿಮೆ ಮಾಡಿ ಚಂದ್ರನಿಗೆ 4,313 ಕಿಮೀಗೆ ಇಳಿಸಿತ್ತು. ಮುಂದಿನ ಚಂದ್ರಯಾನ ಕಾರ್ಯಾಚರಣೆ ಕ್ರಮಗಳು ಆಗಸ್ಟ್ 14 ರಂದು ನಡೆಯಲಿದ್ದು, ಬಾಹ್ಯಾಕಾಶ ನೌಕೆ ಮತ್ತು ಚಂದ್ರನ ನಡುವಿನ ದೂರವನ್ನು ಮತ್ತಷ್ಟು ಕಡಿಮೆ ಮಾಡಲಾಗುತ್ತದೆ. ಆಗಸ್ಟ್ 16 ರಂದು ಚಂದ್ರಯಾನ 100 ಕಿಮೀ ವೃತ್ತಾಕಾರದ ಕಕ್ಷೆಯನ್ನು ಪ್ರವೇಶಿಸಿದಾಗ ಮತ್ತು ಆಗಸ್ಟ್ 17 ರಂದು ಲ್ಯಾಂಡಿಂಗ್ ಮಾಡ್ಯೂಲ್ ಮಾಡುವಾಗ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ (ಪ್ರಜ್ಞಾನ್) ಪ್ರೊಪಲ್ಷನ್ ಮಾಡ್ಯೂಲ್ನಿಂದ ಬೇರ್ಪಡುತ್ತವೆ.
“ಚಂದ್ರನ ಮೇಲ್ಮೈಗೆ ಮತ್ತಷ್ಟು ಹತ್ತಿರದಲ್ಲಿದ್ದೇವೆ. ಇಂದು (ಬುಧವಾರ) ನಡೆಸಿದ ಕಾರ್ಯಾಚರಣೆಯ ನಂತರ ಚಂದ್ರಯಾನ -3 ರ ಕಕ್ಷೆಯನ್ನು 174 ಕಿ.ಮೀ x 1,437 ಕಿ.ಮೀ.ಗೆ ಇಳಿಸಲಾಗಿದೆ. ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 14 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರವರೆಗೆ ನಿಗದಿಪಡಿಸಲಾಗಿದೆ” ಎಂದು ಇಸ್ರೋ ತಿಳಿಸಿದೆ.
ಲ್ಯಾಂಡಿಂಗ್ ಮಾಡ್ಯೂಲ್ ಬೇರ್ಪಟ್ಟ ನಂತರ ಇಸ್ರೋ ಲ್ಯಾಂಡಿಂಗ್ ಮಾಡ್ಯೂಲ್ ಅನ್ನು ಪೆರಿಲುನ್ (ಚಂದ್ರನಿಗೆ ಹತ್ತಿರದ ಬಿಂದು) 30 ಕಿಮೀ ಮತ್ತು ಅಪೊಲೂನ್ 100 ಕಿಮೀ ಇರುವ ಕಕ್ಷೆಗೆ ಇಳಿಸುತ್ತದೆ. ಅಂತಿಮ ಲ್ಯಾಂಡಿಂಗ್ ಅನ್ನು ಇದೇ ಕಕ್ಷೆಯಿಂದ ಪ್ರಯತ್ನಿಸಲಾಗುತ್ತದೆ.
ಆಗಸ್ಟ್ 23 ರಂದು ಚಂದ್ರಯಾನ -3 ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ವಿಕ್ರಮ್ ಅನ್ನು ನಿಧಾನವಾಗಿ ಇಳಿಸುವ ಗುರಿಯನ್ನು ಇಸ್ರೊ ಹೊಂದಿದೆ. ಈ ಸಂಕೀರ್ಣ ತಂತ್ರವು ಲ್ಯಾಂಡರ್ನ ವೇಗವನ್ನು 30 ಕಿಮೀ ಎತ್ತರದಿಂದ ಅಂತಿಮ ಲ್ಯಾಂಡಿಂಗ್ಗೆ ಇಳಿಸುವುದನ್ನು ಒಳಗೊಂಡಿದೆ. ಈ ಪ್ರಕ್ರಿಯೆಯು ನಿಖರವಾದ ಲೆಕ್ಕಾಚಾರ, ಅತ್ಯಾಧುನಿಕ ಕ್ರಮಾವಳಿಗಳು ಮತ್ತು ವಿಶ್ವಾಸಾರ್ಹ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, “ಲ್ಯಾಂಡರ್ನ ವೇಗವನ್ನು 30 ಕಿಮೀ ಎತ್ತರದಿಂದ ಅಂತಿಮ ಲ್ಯಾಂಡಿಂಗ್ ವೇಗಕ್ಕೆ ಇಳಿಸುವ ಪ್ರಕ್ರಿಯೆ ಲ್ಯಾಂಡಿಂಗ್ನ ಅತ್ಯಂತ ನಿರ್ಣಾಯಕ ಭಾಗವಾಗಿದೆ. 30 ಕಿಮೀ ದೂರದಲ್ಲಿ ಬಾಹ್ಯಾಕಾಶ ನೌಕೆಯನ್ನು ಸಮತಲ ದೃಷ್ಟಿಕೋನದಿಂದ ಲಂಬಕ್ಕೆ ವರ್ಗಾಯಿಸುವುದು ತುಂಬಾ ಸವಾಲಿನ ಕೆಲಸವಾಗಿದೆ” ಎಂದು ಹೇಳಿದರು.