ಸೆಕ್ಯೂರಿಟಿ ಗಾರ್ಡ್ ನನ್ನು ಕೊಂದ ಪ್ಯಾಲೆಸ್ಟೀನಿಯನ್ನರು: ಹಂತಕರ ಮನೆ ಮೇಲೆ ಬುಲ್ಡೋಜರ್ ಚಲಾಯಿಸಿದ ಇಸ್ರೇಲ್ ಸರ್ಕಾರ; ಇದು ಯೋಗಿ ಮಾಡೆಲ್ ಎಂದ ನೆಟ್ಟಿಗರು

ಟೆಲ್ ಅವಿವ್: ಯಾಹ್ಯಾ ಮೀರಿ ಮತ್ತು ಯೂಸುಫ್ ಅಸ್ಸಿ ಎನ್ನುವ ಇಬ್ಬರು ಪ್ಯಾಲೆಸ್ಟೀನಿಯನ್ನರು ಇಸ್ರೇಲ್ ನ ವ್ಯಾಚೆಸ್ಲಾವ್ ಗೋಲ್ವ್ ಅನ್ನುವ ಸೆಕ್ಯೂರಿಟಿ ಗಾರ್ಡ್ ಅನ್ನು ಏಪ್ರಿಲ್ ೨೯ ರಂದು ಕೊಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸರಕಾರ ಹಂತಕರ ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಿ ಮನೆಗಳನ್ನು ನೆಲಸಮ ಮಾಡಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಅಗಾಧ ಪ್ರಮಾಣದ ಇಸ್ರೇಲಿ ಸೈನಿಕರನ್ನು ನಿಯುಕ್ತಿಗೊಳಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲಿಗರನ್ನು ಹತ್ಯೆ ಮಾಡುವ ಪ್ಯಾಲೆಸ್ಟೀನಿಯನ್ನರ ಮನೆಗಳನ್ನು ಕೆಡವುತ್ತಿರುವುದು ಇದೆ ಮೊದಲೇನಲ್ಲ. ಇಸ್ರೇಲಿನಲ್ಲಿ ಈ ವಾಡಿಕೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ ಭಾರತದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈ ‘ಬುಲ್ಡೋಜರ್ ಮಾಡೆಲ್’ ಸುದ್ದಿಯಲ್ಲಿದೆ. ಉತ್ತರ ಪ್ರದೇಶದ ಬುಲ್ಡೋಜರ್ ಮಾಡೆಲ್ ಇದೀಗ ಇಡೀ ದೇಶದಲ್ಲಿ ಸದ್ದು ಮಾಡುತ್ತಿದ್ದು, ಅಗತ್ಯ ಬಿದ್ದರೆ ಯೋಗಿ ಮಾಡೆಲ್ ಅನ್ನು ರಾಜ್ಯದಲ್ಲೂ ಜಾರಿ ಮಾಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡಾ ಹೇಳಿದ್ದಾರೆ.

ಯೋಗಿ ಮಾಡೆಲ್ ಅನ್ನು ಒಂದೆರಡು ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಅನ್ವಯಿಸಬೇಕು ಎಂದು ಟ್ವಿಟ್ಟರ್ನಲ್ಲಿ ನೆಟ್ಟಿಗರು ಸರಕಾರಗಳನ್ನು ಒತ್ತಾಯಿಸುತ್ತಿದ್ದಾರೆ.

ಸುದ್ದಿ ಮೂಲ: ಹಿಂದುಸ್ಥಾನ್ ಟೈಮ್ಸ್