ಇರಾನ್ ಮೇಲೆ ಇಸ್ರೇಲ್, ಅಮೆರಿಕ ದಾಳಿ: ವಾಯುಪ್ರದೇಶ ಮುಚ್ಚಿದ ಖತರ್, ಕುವೈತ್, ಯುಎಇ

ದುಬೈ: ಇರಾನ್ ಮೇಲೆ ಇಸ್ರೇಲ್ – ಅಮೆರಿಕದಿಂದ ದಾಳಿ ನಡೆದ ಬಳಿಕ ಮದ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಖತರ್, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಮ್ಮ ವಾಯುಪ್ರದೇಶಗಳನ್ನು ತಕ್ಷಣದಿಂದಲೇ ಮುಚ್ಚಿವೆ. ಭದ್ರತಾ ಪರಿಸ್ಥಿತಿಯನ್ನು ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು Al Jazeera ವರದಿ ಮಾಡಿದೆ.

ಇಸ್ರೇಲ್ ಅಮೆರಿಕದ ದಾಳಿಗೆ ಇರಾನ್ ಪ್ರತಿದಾಳಿ ಆರಂಭಿಸಿದ್ದು ಗಲ್ಫ್ ನಾದ್ಯಂತ ಇರುವ ಅಮೆರಿಕ ನೆಲಗಳು, ಇಸ್ರೇಲ್ ಮೇಲೆ ಗುರಿಯಿಟ್ಟಿದೆ. ಖತರ್ ನ ಅಮೆರಿಕ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯನ್ನು ಖತರ್ ನ ಇಂಟರ್ಸೆಪ್ಟರ್ ತಡೆದಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಗಳ ನಡುವೆ ಮುನ್ನಚ್ಚರಿಕೆ ಕ್ರಮವಾಗಿ ಅನೇಕ ದೇಶಗಳು ತಮ್ಮ ವಾಯುಪ್ರದೇಶಗಳನ್ನು ಮುಚ್ಚಿ ನಾಗರಿಕ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿವೆ.

ಮಾರ್ಚ್ 7 ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ Wizz Air ಇಸ್ರೇಲ್, ಯುಎಇಯ ದುಬೈ ಹಾಗೂ ಅಬುಧಾಬಿ ಮತ್ತು ಜೋರ್ಡಾನ್ ನ ಅಮ್ಮಾನ್ ಗೆ ಹಾಗೂ ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ.

Lufthansa ದುಬೈ, ಟೆಲ್ ಅವೀವ್, ಲೆಬನಾನ್ ನ ಬೈರುತ್ ಮತ್ತು ಒಮಾನ್ ನ ಮಸ್ಕತ್ ಗೆ ಹಾಗೂ ಅಲ್ಲಿಂದ ಹೊರಡುವ ಶನಿವಾರ ಮತ್ತು ರವಿವಾರದ ವಿಮಾನಗಳನ್ನು ರದ್ದುಗೊಳಿಸಿದೆ.ಆಮ್ಸ್ಟರ್ ಡ್ಯಾಮ್ ನಿಂದ ಟೆಲ್ ಅವೀವ್ ಗೆ ಇರುವ ವಿಮಾನಗಳನ್ನು KLM ರದ್ದುಗೊಳಿಸಿದೆ. Oman Air ಇರಾಕ್ ನ ರಾಜಧಾನಿ ಬಾಗ್ದಾದ್ ಗೆ ಹೊರಡುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ.

ರಷ್ಯಾವು ಇರಾನ್ ಮತ್ತು ಇಸ್ರೇಲ್ ಹೋಗುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಕುವೈತ್ ಮುಂದಿನ ಸೂಚನೆ ಬರುವವರೆಗೆ ಇರಾನ್ ಗೆ ಇರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ.ಇರಾಕ್ ಎಲ್ಲಾ ಒಳಬರುವ ಮತ್ತು ಹೊರಹೋಗುವ ವಿಮಾನಗಳನ್ನು ರದ್ದುಗೊಳಿಸಿ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇಸ್ರೇಲ್ ಎಲ್ಲಾ ನಾಗರಿಕ ವಿಮಾನಗಳನ್ನು ರದ್ದುಗೊಳಿಸಿ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.