ಹಮಾಸ್ ವಿರುದ್ದ ಯುದ್ದ ಘೋಷಿಸಿದ ಇಸ್ರೇಲ್: ಉಗ್ರ ದಾಳಿಗೆ ಪ್ರತೀಕಾರ ತೀರಿಸುವ ಪ್ರತಿಜ್ಞೆ ಕೈಗೊಂಡ ಬೆಂಜಮಿನ್ ನೆತನ್ಯಾಹು

ಟೆಲ್ ಅವೀವ್: 22 ಇಸ್ರೇಲಿಗಳನ್ನು ಕೊಂದ ಭೀಕರ ರಾಕೆಟ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿರುವ ಇಸ್ರೇಲ್, ಶನಿವಾರ ಪ್ಯಾಲೆಸ್ಟೈನ್‌ನ ಹಮಾಸ್ ವಿರುದ್ಧ ಯುದ್ಧ ಘೋಷಿಸಿದೆ. ದಿಗ್ಬಂಧನಗೊಂಡಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.

ತಮ್ಮ ದೇಶವು ಯುದ್ಧದಲ್ಲಿದೆ ಮತ್ತು ಹಮಾಸ್ ಹಿಂದೆಂದೂ ಕಂಡಿಲ್ಲದ ಬೆಲೆ ತೆರಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

“ಇಸ್ರೇಲ್ ನಾಗರಿಕರೇ, ನಾವು ಯುದ್ಧದಲ್ಲಿದ್ದೇವೆ. ಇದು ಕಾರ್ಯಾಚರಣೆಯಲ್ಲ, ಉಲ್ಬಣವಲ್ಲ – ಇದು ಯುದ್ಧ. ಮತ್ತು ನಾವು ಗೆಲ್ಲುತ್ತೇವೆ. ಹಮಾಸ್ ಹಿಂದೆಂದೂ ಕಂಡಿಲ್ಲದ ಬೆಲೆಯನ್ನು ತೆರಲಿದೆ” ಎಂದು ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಹಮಾಸ್ ಉಗ್ರಗಾಮಿಗಳು ಈ ಹಬ್ಬದ ರಜೆಯ ಬೆಳಿಗ್ಗಿನ ಜಾವ 5,000 ಕ್ಕೂ ಹೆಚ್ಚು ರಾಕೆಟ್‌ಗಳೊಂದಿಗೆ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಾರೆ. ದೇಶದ ರಕ್ಷಣಾ ಪಡೆಗಳು ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯನ್ನು ಸಹ ಆರೋಪಿಸಿವೆ. ದಾಳಿಯಲ್ಲಿ ಪ್ಯಾರಾಗ್ಲೈಡರ್‌ಗಳನ್ನು ಬಳಸಲಾಗಿರುವ ಮತ್ತು ರಸ್ತೆಗಳಲ್ಲಿ ಹಾದುಹೋಗುವ ಕಾರುಗಳ ಮೇಲೆ ಗುಂಡು ಹಾರಿಸುವ ದೃಶ್ಯಗಳನ್ನು ಇಸ್ರೇಲ್ ತೋರಿಸಿದೆ.

ಇಸ್ರೇಲ್ ವಿರುದ್ಧ ಯುದ್ಧವನ್ನು ಪ್ರಾರಂಭಿಸುವಲ್ಲಿ ಹಮಾಸ್ “ಗಂಭೀರ ತಪ್ಪು” ಮಾಡಿದೆ ಎಂದು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ. “ಹಮಾಸ್ ಇಂದು ಬೆಳಿಗ್ಗೆ ಗಂಭೀರವಾದ ತಪ್ಪನ್ನು ಮಾಡಿದೆ ಮತ್ತು ಇಸ್ರೇಲ್ ರಾಜ್ಯದ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದೆ. IDF ಪಡೆಗಳು (ಇಸ್ರೇಲಿ ಸೈನ್ಯ) ಪ್ರತಿ ಸ್ಥಳದಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಿವೆ” ಎಂದು ಅವರು ಹೇಳಿದ್ದಾರೆ.

ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್‌ನಲ್ಲಿ ವಾಸಿಸುವ ತನ್ನ ನಾಗರಿಕರನ್ನು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಲು ಕೇಳಿಕೊಂಡಿದೆ. ಅನಗತ್ಯ ಅತ್ತಿತ್ತ ಓಡಾಡದಂತೆ ಮತ್ತು ಸುರಕ್ಷತಾ ಆಶ್ರಯಗಳ ಸನಿಹವೇ ಇರುವಂತೆ ನಾಗರಿಕರಿಗೆ ಸಲಹೆ ನೀಡಿದೆ.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಪ್ರಧಾನಿ ಮೋದಿ, “ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮುಗ್ಧ ಬಲಿಯಾದವರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ” ಎಂದಿದ್ದಾರೆ.