ಗಾಜಾ ಉಗ್ರಗಾಮಿಗಳು ರಾಕೆಟ್ ಗಳ ಸುರಿಮಳೆಗೈದರೂ ಇಸ್ರೇಲಿಗರ ಕೂದಲೂ ಕೊಂಕಲು ಬಿಡದ ಐರನ್ ಡೋಮ್!! ಇಸ್ರೇಲಿನ ಅಬೇಧ್ಯ ಕೋಟೆಯ ರಕ್ಷಕ ಈ ಡೋಮ್

ಟೆಲ್ ಅವೀವ್: ಪ್ರಪಂಚದಲ್ಲಿ ಪ್ರತಿನಿತ್ಯವೂ ಯುದ್ದ ಸನ್ನದ್ಧ ಸ್ಥಿತಿಯಲ್ಲಿರುವ ದೇಶ ಇಸ್ರೇಲ್. ಇಲ್ಲಿಯ ಪ್ರತಿ ನಾಗರಿಕನೂ ಒಬ್ಬ ಸೈನಿಕ. ಅತ್ಯಂತ ಮುಂದುವರಿದ ದೇಶವಾಗಿರುವ ಅಂಗೈ ಅಷ್ಟಗಲದ ಇಸ್ರೇಲ್ ಬಳಿ ಅತ್ಯಾಧುನಿಕ ಅಸ್ತ್ರ ಶಸ್ತ್ರಗಳಿವೆ. ಅವೆಲ್ಲವುಗಳಲ್ಲಿ ಅತಿ ವಿನೂತನ ಮತ್ತು ಅತ್ಯಂತ ಮಹತ್ವಪೂರ್ಣವಾಗಿರುವುದು ಐರನ್ ಡೋಮ್. ಇಸ್ರೇಲಿನ ಶತ್ರು ದೇಶವಾದ ಪ್ಯಾಲೆಸ್ಟೀನ್ ನಲ್ಲಿ ನೆಲೆಸಿರುವ ಉಗ್ರಗಾಮಿಗಳು ನಿತ್ಯವೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ತನ್ನ ದೇಶದ ನಾಗರಿಕರನ್ನು ರಕ್ಷಿಸಲು ಇಸ್ರೇಲಿನ ರಕ್ಷಣಾ ಸಚಿವಾಲಯವು ಐರನ್ ಡೋಮ್ ಗಳನ್ನು ಅಭಿವೃದ್ದಿ ಪಡಿಸಿದೆ.

ಇಸ್ರೇಲಿನತ್ತ ನುಗ್ಗುವ ರಾಕೆಟ್ ಗಳನ್ನು ಆಕಾಶದಲ್ಲೇ ಹೊಡೆದು ಉರುಳಿಸುವ ಈ ಐರನ್ ಡೋಮ್ ವ್ಯವಸ್ಥೆ ಅಮೇರಿಕಾದ ಬಳಿಯೂ ಇರಲಿಲ್ಲ. 2011 ತಯಾರಾದ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ 2012 ರಿಂದ ಅಧಿಕೃತವಾಗಿ ಇಸ್ರೇಲಿನ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂದಿನಿಂದಲೂ ಇಸ್ರೇಲಿನ ಒಳನುಗ್ಗುವ ರಾಕೆಟ್‌ಗಳನ್ನು ಪ್ರತಿಬಂಧಿಸುವಲ್ಲಿ 97 ಪ್ರತಿಶತ ಯಶಸ್ಸಿನ ಪ್ರಮಾಣವನ್ನು ಸಾಧಿಸಿದೆ. ಇದೇ ಕಾರಣಕ್ಕಾಗಿ ಜಗತ್ತಿನ ಅತಿ ಬಲಾಢ್ಯ ದೇಶವಾದ ಅಮೇರಿಕಾ ಕೂಡಾ ಇಸ್ರೇಲಿನಿಂದ ಈ ಪ್ರತಿಬಂಧಕ ವ್ಯವಸ್ಥೆಯನ್ನು ಖರೀದಿಸಿದ್ದು, ತನ್ನ ಸೇನೆಯಲ್ಲಿ ಅಳವಡಿಸಿಕೊಳ್ಳುತ್ತಿದೆ. ಐರನ್ ಡೋಮ್ ಮೂರರಿಂದ ನಾಲ್ಕು ಸ್ಥಾಯಿ ಲಾಂಚರ್‌ಗಳನ್ನು ಒಳಗೊಂಡಿದ್ದು, ಸಂಯೋಜಿತ 20 ‘ತಮಿರ್’ ಕ್ಷಿಪಣಿಗಳು ಮತ್ತು ಯುದ್ಧಭೂಮಿ ರಾಡಾರ್ ವ್ಯವಸ್ಥೆಯನ್ನು ಹೊಂದಿದೆ. ಪ್ರತಿ ಬ್ಯಾಟರಿಯು 60 ಚದರ ಮೈಲುಗಳಷ್ಟು ಪ್ರದೇಶವನ್ನು ರಕ್ಷಿಸುತ್ತದೆ.

ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದ ಮೊಬೈಲ್ ಸರ್ವ ಋತು ಏರ್ ಡಿಫೆನ್ಸ್ ಸಿಸ್ಟಮ್ ಇದಾಗಿದೆ. 4 ಕಿಲೋಮೀಟರ್ (2.5 ಮೈಲಿ) ನಿಂದ 70 ಕಿಲೋಮೀಟರ್ (43 ಮೈಲಿ) ದೂರದಿಂದ ಹಾರಿಸಲಾದ ಅಲ್ಪ-ಶ್ರೇಣಿಯ ರಾಕೆಟ್‌ಗಳು ಮತ್ತು ಫಿರಂಗಿ ಶೆಲ್‌ಗಳನ್ನು ಆಕಾಶದಲ್ಲೇ ಪ್ರತಿಬಂಧಿಸಲು ಮತ್ತು ನಾಶಮಾಡಲು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇಸ್ರೇಲಿನ ಈ ಪ್ರತಿಬಂಧಕ ವ್ಯವಸ್ಥೆಯಿಂದಾಗಿ ಇಸ್ರೇಲಿನ ಜನರ ಕೂದಲೂ ಕೂಡಾ ಕೊಂಕುವುದಿಲ್ಲ. ಐರನ್ ಡೋಮ್ ತಯಾರಕರ ಪ್ರಕಾರ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ, ಐರನ್ ಡೋಮ್ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತದೆ ಮತ್ತು ಅನೇಕ ಬೆದರಿಕೆಗಳಿಗೆ ಏಕಕಾಲದಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದೆ.

ದೇಶದ ಒಳಗೆ ರಾಕೆಟ್ ಗಳು ನುಗ್ಗುತ್ತಿದ್ದರೂ, ನಾಗರಿಕರು ನಿಶ್ಚಿಂತೆಯಿಂದ ಇರಬಹುದಾದ ಸ್ಥಿತಿ ಇಸ್ರೇಲಿನಲ್ಲಿ ಇರುವುದಕ್ಕೆ ಈ ಡೋಮ್ ಗಳೆ ಕಾರಣ. ಇಸ್ರೇಲಿನ ನಾಯಕರುಗಳ ರಾಷ್ಟ್ರಪ್ರೇಮ ಮತ್ತು ದೂರದರ್ಶಿತ್ವ ಎಲ್ಲಾ ರಾಷ್ಟ್ರಗಳಿಗೂ ಮಾದರಿ.