ಪರ್ಯಾಯ ಮಹೋತ್ಸದ ಸ್ವಚ್ಛತೆ ಕಾರ್ಯದಲ್ಲಿ ಅವ್ಯವಹಾರ: ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

ಉಡುಪಿ: ಪರ್ಯಾಯ ಮಹೋತ್ಸದ ಸ್ವಚ್ಛತೆ ಕಾರ್ಯಕ್ಕೆ ಸಂಬಂಧಿಸಿ ನೀಡಲಾಗಿದ್ದ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ನಗರಸಭಾ ಸದಸ್ಯರು ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ್ದಾರೆ.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ನಗರಸಭೆ ಸದಸ್ಯರಾದ ಗಿರೀಶ್ ಅಂಚನ್ ಹಾಗೂ ಸಂತೋಷ್ ಜತ್ತನ್ನ ಅವರು, ಪರ್ಯಾಯ ಶುಚಿತ್ವ ಕಾರ್ಯದ ಗುತ್ತಿಗೆ 23ಲಕ್ಷ ರೂ. ಮೊತ್ತಕ್ಕೆ ನೀಡಲಾಗಿದೆ. ಆದರೆ ಗುತ್ತಿಗೆದಾರರಿಂದ ಅಷ್ಟು ಮೊತ್ತದ ಕೆಲಸ ಆಗಿಲ್ಲ ದೂರಿದರು.

ಗುತ್ತಿಗೆದಾರರು ನೂರು ಮಂದಿಯ ಬದಲು ಕೇವಲ 20 ಮಂದಿಯಿಂದ ಕೆಲಸ ಮಾಡಿಸಿದ್ದಾರೆ. ಶುಚಿತ್ವ ಕಾರ್ಯಕ್ಕೆ ಬೇಕಾದ ಸಲಕರಣೆಗಳನ್ನು ಪೂರೈಸಿಲ್ಲ. ಎರಡು ಟಿಪ್ಪರ್ ಹಾಗೂ ಒಂದು ಗೂಡ್ಸ್ ವಾಹನ ಬಳಸಿಕೊಂಡಿದ್ದಾರೆ. ಕೈ ಗಾಡಿಗಳನ್ನು ನಗರಸಭೆಯಿಂದ ಒದಗಿಸಲಾಗಿದೆ ಎಂದು ದೂರಿದರು.

ಇದಕ್ಕೆ ಉತ್ತರಿಸಿ ಅಧ್ಯಕ್ಷೆ ಸುಮಿತ್ರಾ ನಾಯಕ್, 23 ಲಕ್ಷ ರೂ. ಪ್ಯಾಕೇಜ್ ನೀಡಿದರೂ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನು ಪರಿಶೀಲಿಸಿ, ಅಷ್ಟಕ್ಕೆ ಮಾತ್ರ ಬಿಲ್ ಪಾಸ್ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.