ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಹಲವಾರು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರದ ಮೇಲೆ ಅಮೆರಿಕ-ಇಸ್ರೇಲಿ ಜಂಟಿ ದಾಳಿಯ ನಂತರ ಖಮೇನಿ ಕೊಲ್ಲಲ್ಪಟ್ಟರು ಎಂದು ಅಮೆರಿಕದ ಹೇಳಿಕೆಯ ನಂತರ ಈ ಘೋಷಣೆ ಹೊರಬಿದ್ದಿದೆ. ಇರಾನ್ ಘೋಷಣೆ ಮಾಡುವುದಕ್ಕೂ ಮೊದಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಮೇನಿಯನ್ನು ಹೊಡೆದುರುಳಿಸಿದ್ದೇವೆ ಎಂದು ತಿಳಿಸಿದ್ದರು.
ಶನಿವಾರ ಬೆಳಿಗ್ಗೆ ಪ್ರಾರಂಭವಾದ ದಾಳಿಯಲ್ಲಿ ಖಮೇನಿ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯ ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇರಾನ್‌ನ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕಮಾಂಡರ್ ಮೊಹಮ್ಮದ್ ಪಕ್‌ಪೌರ್ ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇರಾನ್‌ನಲ್ಲಿ ಒಂದೇ ದಿನದಲ್ಲಿ 201 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಅಮೆರಿಕ-ಇಸ್ರೇಲ್ ದಾಳಿಯಿಂದಾಗಿ 747 ಜನರು ಗಾಯಗೊಂಡಿದ್ದಾರೆ ಎಂದು ಅದು ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ಹೇಳಿದೆ. ಇರಾನ್‌ನ 24 ಪ್ರಾಂತ್ಯಗಳಲ್ಲಿ ಈ ದಾಳಿಗಳು ನಡೆದಿವೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಸ್ಪಷ್ಟಪಡಿಸಿದೆ.
















