ಅಮೆರಿಕ ದಾಳಿಯ ಬೆನ್ನಲ್ಲೇ ಬಹ್ರೇನ್‌, ಕುವೈಟ್ ಮೇಲೆ ಇರಾನ್ ಪ್ರತಿದಾಳಿ: ಮೊಳಗಿದ ಸೈರನ್

ದುಬೈ: ಅಮೆರಿಕವು ಇರಾನ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಬುಧವಾರ(ಜು. 8) ಬಹ್ರನ್ ಹಾಗೂ ಕುವೈಟ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದೆ.
ದಾಳಿಯ ಹಿನ್ನೆಲೆಯಲ್ಲಿ ಬಹೇನ್‌ನಲ್ಲಿ ಎರಡನೇ ಬಾರಿಗೆ ಕ್ಷಿಪಣಿ ದಾಳಿ ಎಚ್ಚರಿಕೆ ಸೈರನ್ ಮೊಳಗಿಸಲಾಗಿದ್ದು, ಸಾರ್ವಜನಿಕರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸರಕಾರ ಸೂಚನೆ ನೀಡಿದೆ.
ಬಹ್ರನ್ ಹಾಗೂ ಕುವೈಟ್ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ಹೇಳಿಕೊಂಡಿದ್ದರೂ, ಎರಡೂ ದೇಶಗಳಲ್ಲಿ ಸಂಭವಿಸಿದ ಹಾನಿ ಅಥವಾ ಗಾಯಾಳುಗಳ ಕುರಿತು ತತ್ ಕ್ಷಣದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಅಮೆರಿಕದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ ಆರೋಪದ ಬೆನ್ನಲ್ಲೇ ಅಮೆರಿಕ ದಕ್ಷಿಣ ಇರಾನ್‌ನ ಹಲವು ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಗೆ “ನಿರ್ಣಾಯಕ ಮತ್ತು ತಕ್ಕ ಪ್ರತ್ಯುತ್ತರ” ನೀಡುವುದಾಗಿ ಇರಾನ್ ಸೇನಾ ನಾಯಕರು ಎಚ್ಚರಿಕೆ
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿದ ಮಾಹಿತಿಯ ಪ್ರಕಾರ, ಮಂಗಳವಾರ ಆರಂಭವಾದ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಗುರಿಗಳ ಮೇಲೆ ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿದಿದ್ದು, ಬಳಿಕ ಪೂರ್ಣಗೊಂಡಿದೆ ಎಂದು ತಿಳಿಸಿದೆ.
ಹೊರ್ಮುಜ್ ಜಲಸಂಧಿಯ ನಿರ್ವಹಣೆ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಇರಾನ್ ಸೇನೆ ಸ್ಪಷ್ಟಪಡಿಸಿದ್ದು, ಅಮೆರಿಕದ ದಾಳಿಗೆ ಕಠಿನ ಪ್ರತಿಕ್ರಿಯೆ ನೀಡುವುದಾಗಿ ಘೋಷಿಸಿದೆ.