ತೆಹರಾನ್: ಸೆ.16 ರಂದು ಇರಾನ್ ನಲ್ಲಿ ಇರಾನಿ ಮಹಿಳೆಯರಿಂದ ಪ್ರಾರಂಭವಾದ ಹಿಜಾಬ್ ವಿರೋಧಿ ಪ್ರತಿಭಟನೆ ಒಂದು ತಿಂಗಳ ಅವಧಿಯನ್ನು ಪೂರ್ಣಗೊಳಿಸಿದೆ. ಈ ಮಧ್ಯೆ ಇರಾನ್ ನಲ್ಲಿ ಶುರುವಾದ ಪ್ರತಿಭಟನೆಗೆ ವಿಶ್ವದಾದ್ಯಂತದ ನಾಯಕರಿಂದ ಬೆಂಬಲ ವ್ಯಕ್ತವಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡಾ ಪ್ರತಿಭಟನಾ ನಿರತ ಮಹಿಳೆಯರ ಬೆಂಬಲಕ್ಕೆ ನಿಂತಿದ್ದಾರೆ.
ಸೆಪ್ಟೆಂಬರ್ 16 ರಂದು 22 ವರ್ಷದ ಮಹ್ಸಾ ಅಮಿನಿ ಸಾವಿನ ನಂತರ ಇರಾನ್ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಮೊದಲು ಇರಾನ್ ಗೆ ಮಾತ್ರ ಸೀಮಿತವಾಗಿದ್ದ ಪ್ರತಿಭಟನೆ ಇದೀಗ ವಿಶ್ವದೆಲ್ಲೆಡೆ ಹರಡಿದ್ದು, ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ತಮ್ಮ ಆಕ್ರೋಶವನ್ನು ಹೊರಗೆಡಹುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸುತ್ತಾ ಮಹಿಳಾ ಅಥ್ಲೀಟ್ಗಳಿಗೆ ಹೇರಲಾದ ನಿರ್ಬಂಧಗಳನ್ನು ಬಹಿರಂಗವಾಗಿ ಧಿಕ್ಕರಿಸಿದ ಇರಾನಿನ ಆರೋಹಿಯೊಬ್ಬರು ಹಿಜಾಬ್ ಧರಿಸದೆ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಾರೆ.
In a historic move, Iranian athlete Elnaz Rekabi who represented Iran at the Asian Climbing Competitions finals in Seoul, competed without hijab, disobeying the Islamic Republic's restrictions for female athletes. pic.twitter.com/KvxE5NoQLi
— Iran International English (@IranIntl_En) October 16, 2022
ಇಸ್ಲಾಮಿಕ್ ಗಣರಾಜ್ಯದ ಅವನತಿಗೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ತಬ್ರಿಜ್ ಮತ್ತು ರಾಶ್ತ್ ನಗರಗಳನ್ನು ಒಳಗೊಂಡಂತೆ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗಲಭೆ ನಿಗ್ರಹ ಪೊಲೀಸರ ಭಾರೀ ಪಡೆಯನ್ನು ನಿಯೋಜಿಸುವ ಮೂಲಕ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.
ಅಮೇರಿಕಾ, ಜರ್ಮನಿ, ಯುಕೆ ಸೇರಿದಂತೆ ಹಲವು ರಾಷ್ಟ್ರಗಳು ಇರಾನ್ ಸರ್ಕಾರದ ಈ ನಡೆಯನ್ನು ಖಂಡಿಸಿವೆ. ಅತ್ತ ಟೆಹ್ರಾನ್ ಕೂಡಾ ಪಶ್ಚಿಮ ದೇಶಗಳನ್ನು ದೂಷಿಸುತ್ತಾ ಪಾಶ್ಚಿಮಾತ್ಯ ರಾಷ್ಟ್ರಗಳು ದೇಶದಲ್ಲಿ ಅಶಾಂತಿ ಹೆಚ್ಚಿಸುತ್ತಿದೆ ಮತ್ತು ಪ್ರತಿಭಟನೆಗೆ ಧನಸಹಾಯ ಮಾಡುತ್ತಿದೆ ಎಂದು ಆರೋಪ ಹೊರಿಸಿದೆ.
ವರದಿ: ವಿಯಾನ್ ನ್ಯೂಸ್