ಬೆಂಗಳೂರು: ಐಪಿಎಸ್ ಅಧಿಕಾರಿ ಡಿ ರೂಪ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಾರ್ವಜನಿಕ ವಾಗ್ವಾದದ ನಂತರ, ರಾಜ್ಯ ಸರ್ಕಾರ ಮಂಗಳವಾರ ಇಬ್ಬರು ಅಧಿಕಾರಿಗಳನ್ನೂ ವರ್ಗಾವಣೆ ಮಾಡಿದೆ. ಸರ್ಕಾರದ ಆದೇಶದ ಪ್ರಕಾರ ಅವರಿಗೆ ಯಾವುದೇ ಹುದ್ದೆ ನೀಡಿಲ್ಲ.
ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಸಹ ಜಾರಿ ಮಾಡಲಾಗಿದ್ದು, ಸಹೋದ್ಯೋಗಿಗಳ ವಿರುದ್ಧ ಯಾವುದೇ ಆರೋಪಗಳನ್ನು ಮಾಡಲು ಮಾಧ್ಯಮಗಳನ್ನು ಸಂಪರ್ಕಿಸದಂತೆ ಸೂಚಿಸಲಾಗಿದೆ.
ರೂಪಾ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಾಗಿದ್ದರು.
ರೂಪಾ ಅವರ ಪತಿ ಮುನೀಶ್ ಮೌದ್ಗಿಲ್ ಅವರು ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸರ್ವೆ, ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಇಲಾಖೆಯಿಂದ ವರ್ಗಾವಣೆಗೊಂಡಿದ್ದಾರೆ. ಅವರನ್ನು ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ.
ಕಳೆದ ಶನಿವಾರ ಸಿಂಧೂರಿ ವಿರುದ್ಧ ರೂಪಾ 19 ಆರೋಪಗಳನ್ನು ಮಾಡಿದ ನಂತರ ಇಬ್ಬರು ಅಧಿಕಾರಿಗಳ ನಡುವಿನ ಜಗಳ ಪ್ರಾರಂಭವಾಯಿತು. ಭಾನುವಾರ, ರೂಪಾ ಐಎಎಸ್ ಅಧಿಕಾರಿಯ ಏಳು ಫೋಟೋಗಳನ್ನು ಹಂಚಿಕೊಂಡು, ಅವುಗಳನ್ನು ಪುರುಷ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪ ಹೊರಿಸಿದ್ದರು. ಸಿಂಧೂರಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ರೂಪಾ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ಸಲ್ಲಿಸಿದ್ದಾರೆ.
ಪ್ರತಿಯಾಗಿ ಸಿಂಧೂರಿ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ರೂಪಾ ಸುಳ್ಳು, ವೈಯಕ್ತಿಕ ನಿಂದನೆಯ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ಸಿಂಧೂರಿ ಕೂಡಾ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ಆಕೆಯ ಪತಿ ಸುಧೀರ್ ರೆಡ್ಡಿ ಕೂಡ ರೂಪಾ ವಿರುದ್ಧ ಮಾನನಷ್ಟ ಆರೋಪ ಹೊರಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.