ರೋಚಕ‌ ಘಟ್ಟದಲ್ಲಿ ಅಣುಕು ಸಾಮಾನ್ಯ: ಅಶ್ವಿನ್

ಬೆಂಗಳೂರು: ಬುಧವಾರ ನಡೆದ‌ ನನ್ನ ಮತ್ತು ವಿರಾಟ್ ಕೊಹ್ಲಿ ಆವರ ನಡವಳಿಕೆಯು ಆ ಸಂದರ್ಭದ ಒತ್ತಡದಲ್ಲಿ ನಡೆದಿದೆಯಷ್ಟೇ ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ 202 ರನ್‌ಗಳ ಗುರಿ ನೀಡಿತ್ತು. ಬೆನ್ನಟ್ಟಿದ ಪಂಜಾಬ್ ಗೆ ಕೊನೆಯ ಓವರ್‌ನಲ್ಲಿ 27 ರನ್‌ಗಳ ಅಗತ್ಯವಿತ್ತು. ಆ ಓವರ್ ಬೌಲಿಂಗ್ ಮಾಡಿದ  ಉಮೇಶ್ ಯಾದವ್ ಎಸೆತವನ್ನು ಅಶ್ವಿನ್ ಲಾಂಗ್‌ ಆನ್‌ ಬೌಂಡರಿ ಗೆರೆ ದಾಟಿಸುವ ಪ್ರಯತ್ನ ಮಾಡಿದರು. ಆದರೆ ಮುಂದೆ ನುಗ್ಗಿ ಬಂದು ಕ್ಯಾಚ್ ಮಾಡಿದ ವಿರಾಟ್ ಕೊಹ್ಲಿ ಸಂಭ್ರಮಿಸಿದರು. ಜತೆಗೆ ಅಶ್ವಿನ್ ಅವರನ್ನೇ ದುರುಗುಟ್ಟಿ ನೋಡುತ್ತ ಮಂಕಡಿಂಗ್ ಶೈಲಿಯ ಅಣಕು ಪ್ರದರ್ಶಿಸಿದರು. ಅದನ್ನು ನೋಡುತ್ತಲೇ ಕ್ರೀಸ್‌ ಬಿಟ್ಟು ಸಾಗಿದ ಅಶ್ವಿನ್ ಡಗ್‌ಔಟ್‌ನಲ್ಲಿ ತಮ್ಮ ಗ್ಲೌಸ್‌ಗಳನ್ನು ಕಿತ್ತೆಸೆದರು.
ಪಂದ್ಯದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನ್, ‘ಪಂದ್ಯದ ರೋಚಕ ಘಟ್ಟದಲ್ಲಿ ಇದೆಲ್ಲವೂ ಸಾಮಾನ್ಯ. ನಾನಂತೂ ವಿರಾಟ್ ಅವರ ಕ್ರಿಯೆಗೆ ಸಹಜವಾಗಿಯೇ ಪ್ರತಿಕ್ರಿಯಿಸಿದ್ದೇನೆ. ಇದರಲ್ಲಿ ಯಾವುದೇ ಅಪಾರ್ಥ ಬೇಡ’ ಎಂದರು.
ಸೋಲಿನ ಬೇಸರ: ಕೊಹ್ಲಿ
ಟೂರ್ನಿಯ ಮೊದಲ ಹಂತದಲ್ಲಿ ಸತತ ಆರು ಪಂದ್ಯಗಳಲ್ಲಿ ಸೋಲನುಭವಿಸಿದ್ದು ಬೇಸರವಾಗಿತ್ತು. ಸದ್ಯ ನಾಲ್ಕು ಜಯಗಳಿಂದ ತುಸು ಸಮಾಧಾನವಾಗಿದೆ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
‘ಸತತ ಸೋಲುಗಳು ನಿಜಕ್ಕೂ ನೋವುಂಟು ಮಾಡುತ್ತವೆ. ಪ್ಲೇ ಆಫ್‌ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಈಗ ನಮ್ಮ ಬಳಿ ಇರುವ ಅವಕಾಶಗಳಲ್ಲಿ ಒಂದು ತಂಡವಾಗಿ ಆಡುವುದಷ್ಟೇ ನಮ್ಮ ಉದ್ದೇಶ. ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದೇವೆ. ಬಹಳಷ್ಟು ಆನಂದವನ್ನು ಅನುಭವಿಸಿದ್ದೇವೆ’ ಎಂದರು.