ತ್ರಿಶಾ ವಿದ್ಯಾ ಕಾಲೇಜಿನಲ್ಲಿಬಿಸಿಎವಿದ್ಯಾರ್ಥಿಗಳಿಗೆ ಐಒಟಿ ಕಾರ್ಯಾಗಾರ

ಕಟಪಾಡಿ, ಆ. 7: ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ & ಮ್ಯಾನೇಜ್‌ಮೆಂಟ್‌ನ ಬಿಸಿಎ ವಿಭಾಗ ಹಾಗೂ ಐಟಿ ಕ್ಲಬ್‌ನ ಆಶ್ರಯದಲ್ಲಿ ಆಗಸ್ಟ್ 7ರಂದು “ಇಂಟರ್ನೆಟ್ ಆಫ್ ಥಿಂಗ್ಸ್ (IoT)” ವಿಷಯದ ಕುರಿತು ಒಂದು ದಿನದ ಪ್ರಾಯೋಗಿಕ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳಿಗೆ ಐಒಟಿ ತಂತ್ರಜ್ಞಾನದ ಮೂಲಭೂತ ಪರಿಕಲ್ಪನೆಗಳು ಹಾಗೂ ಅದರ ಪ್ರಾಯೋಗಿಕ ಬಳಕೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಿಟ್ಟೆ ಪರಿಗಣಿತ  (NMAMIT) ವಿಶ್ವವಿದ್ಯಾಲಯದ ಡಾ. ಸುಕೇಶ್ ಹಾಗೂ ಶ್ರೀ ದಿಲೀಪ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಐಒಟಿ ತಂತ್ರಜ್ಞಾನದ ವಿವಿಧ ಆಯಾಮಗಳ ಕುರಿತು ಉಪನ್ಯಾಸ ನೀಡಿದರು. ಬಳಿಕ ನಡೆದ ಪ್ರಾಯೋಗಿಕ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಐಒಟಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉಪಕರಣಗಳನ್ನು ಬಳಸಿಕೊಂಡು ಸೆನ್ಸರ್ ಡೇಟಾ ಸಂಗ್ರಹಣೆ, ಸಾಧನಗಳ ಸಂಪರ್ಕ ಹಾಗೂ ಸರಳ ಐಒಟಿ ಅನ್ವಯಿಕೆಗಳನ್ನು ರೂಪಿಸುವ ವಿಧಾನಗಳನ್ನು ಕಲಿತುಕೊಂಡರು.

ಕಾರ್ಯಾಗಾರದಲ್ಲಿ ಬಿಸಿಎ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ನವೀನ ತಂತ್ರಜ್ಞಾನಗಳ ಕುರಿತು ತಮ್ಮ ಜ್ಞಾನ ಹಾಗೂ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಸಿದ್ಧಾಂತ್ ಫೌಂಡೇಶನ್‌ನ ಟ್ರಸ್ಟಿ ಶ್ರೀಮತಿ ನಮಿತಾ ಜಿ. ಭಟ್ ಉದ್ಘಾಟಿಸಿದರು. ಟ್ರಸ್ಟಿ ರಾಮ್ ಪ್ರಭು ಉಪಸ್ಥಿತರಿದ್ದರು,ತ್ರಿಶಾ ವಿದ್ಯಾ ಸಂಧ್ಯಾ  ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಲದೀಪ್ ವೈ ಅಧ್ಯಕ್ಷತೆ ವಹಿಸಿದ್ದರು. ಬಿಸಿಎ ವಿಭಾಗದ ಮುಖ್ಯಸ್ಥೆ ಪ್ರೊ. ದಿವ್ಯಶ್ರೀ, ಐಟಿ ವಿಭಾಗದ ಸಂಯೋಜಕಿ ಪ್ರೊ. ಸರಸ್ವತಿ ಆರ್. ಡಿ., ಬೋಧಕ ವೃಂದ ಹಾಗೂ ಬಿಸಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು