ಏರುತ್ತಿರುವ ಇಂಧನ ಬೆಲೆಗೆ ಕಡಿವಾಣ: ಮೆಥನಾಲ್ ಮಿಶ್ರಿತ ಪೆಟ್ರೋಲ್ ಎಂ 15 ಬಿಡುಗಡೆ

ದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೊಸ ಮಾದರಿಯ ಪೆಟ್ರೋಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿರುವ ಹೊಸ ಮಾದರಿಯ ಈ ಪೆಟ್ರೋಲ್ ನಿಂದಾಗಿ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಮೂಲಕ ಪೈಲಟ್ ಯೋಜನೆಯಾಗಿ ಶೇ. 15 ರಷ್ಟು ಮೆಥೆನಾಲ್ ಮಿಶ್ರಣವನ್ನು ಹೊಂದಿರುವ ಪೆಟ್ರೋಲ್ ‘ಎಂ 15’ ಅನ್ನು ಬಿಡುಗಡೆಮಾಡಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಶನಿವಾರ ‘ಎಂ 15’ ಪೆಟ್ರೋಲ್ ಅನ್ನು ನೀತಿ ಆಯೋಗದ ಸದಸ್ಯ ವಿಕೆ ಸಾರಸ್ವತ್ ಮತ್ತು ಐಒಸಿ ಅಧ್ಯಕ್ಷ ಎಸ್‌ಎಂ ವೈದ್ಯ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದಾರೆ. ಮೆಥನಾಲ್ ಮಿಶ್ರಿತ ಪೆಟ್ರೋಲ್ ನಿಂದ ಏರುತ್ತಿರುವ ಇಂಧನ ಬೆಲೆಗೆ ಕಡಿವಾಣ ಬೀಳಲಿದೆ ಎಂದು ತೇಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಬೆಲೆ ಇಳಿಕೆಯಿಂದ ಜನ ಸಾಮಾನ್ಯರಿಗೆ ಸಾಕಷ್ಟು ನೆಮ್ಮದಿ ಸಿಗಲಿದೆ ಎಂಬ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ.

ಮೆಥನಾಲ್‌ನ ಸುಲಭ ಲಭ್ಯತೆಯನ್ನು ಪರಿಗಣಿಸಿ ಟಿನ್‌ಸುಕಿಯಾವನ್ನು ಈ ಉಪಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ಇದನ್ನು ಅಸ್ಸಾಂ ಪೆಟ್ರೋಕೆಮಿಕಲ್ ಲಿಮಿಟೆಡ್ ಉತ್ಪಾದಿಸಲಿದೆ.