ಮಂಗಳೂರು ಸ್ಪೋಟ ಪ್ರಕರಣ: ದೇಶದ್ರೋಹ ಕಾಯ್ದೆಯಡಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶಾರೀಫ್ ಮನೆ ಮೇಲೆ ತನಿಖಾ ತಂಡ ದಾಳಿ

ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಶನಿವಾರದಂದು ನಿಗೂಢ ಸ್ಫೋಟ ಸಂಭವಿಸಿದ್ದು, ಸ್ಫೋಟದ ಬಳಿಕ ನಡೆದ ತನಿಖೆಯಲ್ಲಿ ಇದು ಉದ್ದೇಶಪೂರ್ವಕವಾಗಿ ಮಾಡಲಾದ ಭಯೋತ್ಪಾದಕ ಕೃತ್ಯ ಎಂದು ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿಕೆ ನೀಡಿದ್ದರು. ಇದೀಗ ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆಟೋರಿಕ್ಷಾ ಪ್ರಯಾಣಿಕ ಮೊಹಮ್ಮದ್ ಶಾರಿಕ್ ಎಂದು ಬಹಿರಂಗವಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಭಯೋತ್ಪಾದನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ.

ಈತ ಗೋಡೆ ಮೇಲೆ ಬೆದರಿಕೆ ಹಾಕುವ ಬರಗಳನ್ನು ಬರೆದಿದ್ದ. ಈತನ ಇಂಜಿನಿಯರಿಂಗ್ ಪದವೀಧರ ಸಹವರ್ತಿ ಮಾಜ್ ಮುನೀರ್ ಅಹ್ಮದ್ ನೊಂದಿಗೆ ಈತನನ್ನು ಬಂಧಿಸಲಾಗಿತ್ತು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ತದನಂತರ ಆತ ತಲೆಮರೆಸಿಕೊಂಡಿದ್ದ.

Police investigate after an explosion in an auto-rickshaw in Mangaluru.
Image: PTI

2022 ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭದ್ರತಾ ಏಜೆನ್ಸಿಗಳು ಈತನ ಚಟುವಟಿಕೆಗಳ ಬಗ್ಗೆ ಮತ್ತೆ ಮಾಹಿತಿ ಪಡೆದಾಗ ಆತ ಇಸ್ಲಾಮಿಕ್ ಸ್ಟೇಟ್ ನ ಅಲ್ ಹಿಂದ್ ಘಟಕದ ಪ್ರಮುಖ ಸದಸ್ಯನ ಸಹವರ್ತಿ ಮತ್ತು ಶಿವಮೊಗ್ಗ ಘಟಕದ ಕಿಂಗ್‌ಪಿನ್ ಎಂದು ತಿಳಿದುಬಂದಿದೆ. ಪಿಡಿಎಫ್ ಫೈಲ್‌ಗಳು, ವಿಡಿಯೋಗಳು ಮತ್ತು ಮೊಹಮ್ಮದ ಕಳುಹಿಸುತ್ತಿದ್ದ ಹಲವಾರು ವಸ್ತುಗಳ ಮೂಲಕ ಬಾಂಬ್ ತಯಾರಿಸುವುದನ್ನು ಆತನ ಸಹವರ್ತಿಗಳು ಕಲಿತಿದ್ದರು. ಈತ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಅನ್ನು ನಿಶ್ಚಿತ ಜಾಗಕ್ಕೆ ತಲುಪಿಸುವ ಮೊದಲೆ ಅದು ಸ್ಪೋಟಗೊಂಡಿದೆ ಎನ್ನಲಾಗುತ್ತಿದೆ.

ಮಂಗಳೂರು ಸ್ಫೋಟ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕನನ್ನು ವಿಚಾರಿಸಿದಾಗ, ಪ್ರಯಾಣಿಕ ಬ್ಯಾಗ್‌ನಲ್ಲಿ ಏನನ್ನೋ ಹೊತ್ತೊಯ್ದಿದ್ದು, ಬೆಂಕಿ ಹೊತ್ತಿಕೊಂಡು ವಾಹನಕ್ಕೆ ವ್ಯಾಪಿಸಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಕಲಿ ಗುರುತಿನ ಚೀಟಿ ಹೊಂದಿದ್ದ ಮೊಹಮ್ಮದ್, ಮಂಗಳೂರು ರೈಲ್ವೆ ಜಂಕ್ಷನ್‌ನಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ನಾಗೂರಿನಲ್ಲಿ ಹತ್ತಿದ್ದನು. ಸ್ಫೋಟದ ನಂತರ ಆಟೋರಿಕ್ಷಾದಿಂದ ಕುಕ್ಕರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆಗಳು, ಬಸ್ ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಉಗ್ರಗಾಮಿ ಸಂಘಟನೆಗಳ ಸಂಪರ್ಕವನ್ನು ಹೊಂದಿರುವ ಈತ ನೆರೆಯ ತಮಿಳುನಾಡಿನ ಕೊಯಮತ್ತೂರು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದಾನೆ. ಮೇಲ್ನೋಟಕ್ಕೆ ಇದೊಂದು ಭಯೋತ್ಪಾದಕ ಕೃತ್ಯ. ಆತ ಕೊಯಮತ್ತೂರು ಅಥವಾ ಇತರ ಯಾವುದೇ ಸ್ಥಳಗಳಿಗೆ ಪ್ರಯಾಣಿಸಿದ ಸ್ಥಳಗಳು ಅವನ ಭಯೋತ್ಪಾದಕ ಸಂಬಂಧವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಮೊಹಮ್ಮದ್ ಈಗ ಆಸ್ಪತ್ರೆಯಲ್ಲಿದ್ದು, ಈತನಿಗೆ ಪ್ರಜ್ಞೆ ಬಂದ ನಂತರ ಮುಂದಿನ ತನಿಖೆ ಕೈಗೊಳ್ಳಲಾಗುವುದು. ತನಿಖೆಯಿಂದ ಹೆಚ್ಚಿನ ವಿವರಗಳು ಬೆಳಕಿಗೆ ಬರಲಿವೆ. ಇದರ ಹಿಂದೆ ವಿಶಾಲವಾದ ನೆಟ್‌ವರ್ಕ್ ಇದೆ, ಅದು ಭೇದಿಸಲ್ಪಡುತ್ತದೆ ಎಂದು ಅವರು ಹೇಳಿದ್ದಾರೆ.

ಮಂಗಳೂರು ಸ್ಫೋಟ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ವಿಭಾಗ (ಎಫ್‌ಎಸ್‌ಎಲ್) ತಂಡವು ಭಾನುವಾರ ಮೈಸೂರಿನಲ್ಲಿ ಮೊಹಮ್ಮದ್ ಬಾಡಿಗೆಗೆ ಪಡೆದ ಮನೆಗೆ ತಲುಪಿದೆ. ಆತನ ನಿವಾಸದಿಂದ ಸ್ಫೋಟಕಗಳನ್ನು ತಯಾರಿಸಲು ಬಳಸಲಾದ ವಸ್ತುಗಳನ್ನು ತಂಡವು ವಶಪಡಿಸಿಕೊಂಡಿದೆ.

ಎಫ್‌ಎಸ್‌ಎಲ್ ತಂಡವು ಸ್ಫೋಟಕಗಳನ್ನು ತಯಾರಿಸಲು ಬಳಸುತ್ತಿದ್ದ ಜೆಲಾಟಿನ್ ಪೌಡರ್, ಸರ್ಕ್ಯೂಟ್ ಬೋರ್ಡ್, ಸಣ್ಣ ಬೋಲ್ಟ್‌ಗಳು, ಬ್ಯಾಟರಿಗಳು, ಮೊಬೈಲ್, ಮರದ ಪುಡಿ, ಅಲ್ಯೂಮಿನಿಯಂ ಮಲ್ಟಿಮೀಟರ್‌ಗಳು, ವೈರ್‌ಗಳು, ಮಿಶ್ರಣ ಜಾರ್‌ಗಳು, ಪ್ರೆಶರ್ ಕುಕ್ಕರ್ ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ. ಜೊತೆಗೆ ಒಂದು ಮೊಬೈಲ್ ಫೋನ್, ಎರಡು ನಕಲಿ ಆಧಾರ್ ಕಾರ್ಡ್‌ಗಳು, ಒಂದು ನಕಲಿ ಪ್ಯಾನ್ ಕಾರ್ಡ್ ಮತ್ತು ಒಂದು ಫಿನೋ ಡೆಬಿಟ್ ಕಾರ್ಡ್ ಕೂಡಾ ದೊರೆತಿದೆ. ಆರೋಪಿ ತನ್ನ ಮನೆಯಲ್ಲಿ ಸ್ಫೋಟಕಗಳನ್ನು ಸಿದ್ಧಪಡಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.